ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಆರ್.ಎಂ.ಮಂಜುನಾಥಗೌಡಗೆ ಒತ್ತಾಯ

ಶಿವಮೊಗ್ಗ, ಆ. 26: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿ, ಹೊಸನಗರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರಮುಖರು ಆರ್.ಎಂ.ಮಂಜುನಾಥಗೌಡಗೆ ಒತ್ತಾಯಿಸಿವೆ.

ಈ ಸಂಬಂಧ ಮಂಗಳವಾರ ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಖುದ್ದು ಆರ್.ಎಂ.ಮಂಜುನಾಥಗೌಡಗೆ ಪ್ರಮುಖರು ಮನವಿ ಪತ್ರ ಅರ್ಪಿಸಿದ್ದಾರೆ.

ಕೊಡುಗೆ: ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, ಜಿಲ್ಲೆ ಮಾತ್ರವಲ್ಲದೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನವನ್ನು ಆರ್.ಎಂ.ಎಂ. ನಡೆಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ತರವಾದುದಾಗಿದೆ ಎಂದು ಮನವಿಯಲ್ಲಿ ಮುಖಂಡರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಮತ್ತಷ್ಟು ಬಲವರ್ಧನೆಯಾಗಬೇಕಾದರೆ, ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿ ಆರ್.ಎಂ.ಎಂ. ಮುಂದುವರಿಯಬೇಕಾಗಿದೆ. ಈ ಕಾರಣದಿಂದಲೇ 2019 ರಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಆದರೆ ದಿಢೀರ್ ಆಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಸರಿಯಲ್ಲವಾಗಿದೆ. ಶಿವಮೊಗ್ಗದ ಸಹಕಾರಿ ಕ್ಷೇತ್ರಕ್ಕೆ ಆರ್.ಎಂ.ಎಂ. ಸೇವೆ ಅಗತ್ಯವಾಗಿದೆ. ಈ ಕಾರಣದಿಂದ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಮನವಿಯಲ್ಲಿ ಮುಖಂಡರು ಆಗ್ರಹಿಸಿದ್ದಾರೆ.