
ಭಾಲ್ಕಿ:ಆ.25: ಜಿಲ್ಲೆಯ ರೈತರಿಗೆ ಪಾರದರ್ಶಕವಾಗಿ ಸರಕಾರದ ಸೌಲಭ್ಯ ಮತ್ತು ಯೋಜನೆಗಳು ತಲುಪಿಸಲು ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ಪಟ್ಟರು.
ಪಟ್ಟಣದ ಆದಿತ್ಯ ಹೋಟೆಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಬೀದರ್ ಡಿಸಿಸಿ ಬ್ಯಾಂಕ್‍ನ ಚುನಾವಣೆ-2023 ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಜೀವನಾಡಿ ಎನಸಿಕೊಂಡಿರುವ ಡಿಸಿಸಿ ಬ್ಯಾಂಕ್ ಹಲವು ವರ್ಷಗಳಿಂದ ಒಬ್ಬರ ಹಿಡಿತದಲ್ಲಿದೆ. ಇದರಿಂದ ರೈತರಿಗೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿವೆ. ಮಧ್ಯಮಾವಧಿ, ದೀರ್ಘಾವಧಿ ಸಾಲ ಸೇರಿ ವಿವಿಧ ಯೋಜನೆಗಳು ಅರ್ಹರಿಗೆ ಮರೀಚಿಕೆಯಾಗಿವೆ. ಸರಕಾರದಿಂದ ಕೊಡಲಾಗುವ 3 ಲಕ್ಷ, 5 ಲಕ್ಷ ರೂ ವರೆಗಿನ ಶೂನ್ಯ ಬಡ್ಡಿದರ ಸಾಲ ಕೂಡ ರೈತರಿಗೆ ಸಿಗುತ್ತಿಲ್ಲ.
ಅರ್ನಹರಿಗೆ ಬೇಕಾಬಿಟ್ಟಿ ಸಾಲ ಕೊಡಲಾಗುತ್ತಿದೆ. ಡಿಸಿಸಿ ಬ್ಯಾಂಕ್‍ನಡಿ ನಡೆಯುವ ಎಲ್ಲ ಪಿಕೆಪಿಎಸ್‍ಗಳ ಮೇಲೆ ಹಿಡಿತ ಸಾಧಿಸಲಾಗುತ್ತಿದೆ. ಬ್ಯಾಂಕ್‍ನ ಪ್ರಗತಿ ನಿಂತು ಹೋಗಿದೆ. ಹೀಗೆ ಮುಂದುವರೆದರೇ ಬ್ಯಾಂಕ್ ಸಂಕಷ್ಟ ಎದುರಿಸಲಿದೆ. ಹಾಗಾಗಿ ರೈತರು ಬದಲಾವಣೆ ಬಯಸಿದ್ದಾರೆ ಎಂದರು.
ನನ್ನ ಸಹೋದರ ಅಮರ ಖಂಡ್ರೆ ಅವರು ಎರಡು ಅವಧಿಗೆ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಬರುವ ಅ.4 ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಅಮರ ಖಂಡ್ರೆ ನೇತೃತ್ವದ ಪೆನಾಲ್ ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದು, ಎಲ್ಲರೂ ಬೆಂಬಲಿಸಬೇಕು ಎಂದರು.
ಹೊಸದಾಗಿ ಆಡಳಿತ ಮಂಡಳಿ ರಚನೆಯಾದರೇ ಬ್ಯಾಂಕ್‍ನ ಅಭಿವೃದ್ಧಿಗೆ ವೇಗದ ಜತೆಗೆ ಪಾರದರ್ಶಕ ಆಡಳಿತ ಸಿಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು, ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲು ಸಹಕಾರಿಯಾಗಲಿದೆ. ಯೋಜನೆಗಳ ಲಾಭ ನೇರವಾಗಿ ರೈತರಿಗೆ ಸಿಗುತ್ತದೆ. ಪಿಕೆಪಿಎಸ್‍ಗಳು ಕೂಡ ಆರ್ಥಿಕವಾಗಿ ಸದೃಢವಾಗುತ್ತವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ ಮಾತನಾಡಿದರು.
ಈ ಸಂದರ್ಭದಲ್ಲಿ ಅಮರ ಖಂಡ್ರೆ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಹಿರಿಯ ಮುಖಂಡ ವೈಜಿನಾಥ ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕರಾವ ಸೋನಜಿ, ಪುರಸಭೆ ಸದಸ್ಯ ಬಸವರಾಜ ವಂಕೆ, ಯುವ ಮುಖಂಡ ಪ್ರವೀಣ ಹಣಮಶೆಟ್ಟಿ ಸೇರಿದಂತೆ ಹಲವರು ಇದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ ಸ್ವಾಗತಿಸಿದರು. ರಮೇಶ ಚಿದ್ರಿ ವಂದಿಸಿದರು.