ಆಲಮಟ್ಟಿ: ಜು.30:ರೈತರ ಹಿತ ಕಾಪಾಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿಗಳು ಆದ ಜಲಸಂಪನ್ಮೂಲ ಸಚಿವರ ನಿರ್ದೇಶನದ ಮೇರೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ನೀರಾವರಿ ಯೋಜನೆಗಳ ಕಾಲುವೆಗಳ ಜಾಲಕ್ಕೆ ಕೃಷಿಗಾಗಿ ನೀರು ಹರಿಸಲು ಆರಂಭಿಸಲಾಗಿದೆ.
ಜುಲೈ 27 ರಿಂದಲೇ ನೀರು ಹರಿಸುವಂತೆ ಸಚಿವರು ಸೂಚಿಸಿದ್ದು, ಅಲ್ಲಿಂದ 120 ದಿನಗಳ ಕಾಲ ಅಂದರೆ ನವ್ಹಂಬರ್ 23 ರವರೆಗೆ ಮುಂಗಾರು ಅವಧಿಗೆ ಕಾಲುವೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವವರೆಗೂ ಎರಡು ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನಿತ್ಯವೂ ಕಾಲುವೆಗೆ ನೀರು ಹರಿಸುವುದು, ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲು 8 ದಿನ ಬಂದ್ ಪದ್ಧತಿ ಅನುಸರಿಸಿ ನೀರು ಹರಿಸಲು ನಿರ್ಧರಿಸಲಾಗಿದೆ.
ನೀರಿನ ಸಂಗ್ರಹ:
ಆಲಮಟ್ಟಿ ಜಲಾಶಯದಲ್ಲಿ 89 ಟಿಎಂಸಿ ಅಡಿ, ನಾರಾಯಣಪುರ ಜಲಾಶಯದಲ್ಲಿ 24 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮುಂಗಾರು ಹಂಗಾಮಿಗೆ ಕಾಲುವೆಗಳ ಜಾಲಕ್ಕೆ ನೀರು ಹರಿಸಲು ಎರಡು ಜಲಾಶಯಗಳ ನೀರಾವರಿಗಾಗಿ ಒಟ್ಟಾರೇ 67 ಟಿಎಂಸಿ ಅಡಿ ಮತ್ತು ಇತರೆ ಬೇಡಿಕೆಗಳಿಗಾಗಿ 13 ಟಿಎಂಸಿ ಅಡಿ ನೀರು ಅಗತ್ಯವಿದೆ. ಅಷ್ಟು ನೀರು ಎರಡು ಜಲಾಶಯಗಳಲ್ಲಿ ಸಂಗ್ರಹವಿದೆ.
ನೀರಾವರಿ ಸಲಹಾ ಸಮಿತಿ ರಚನೆಗೊಂಡ ನಂತರ ಮೊದಲ ಸಭೆಯಲ್ಲಿ, ಈಗ ಕೈಗೊಂಡಿರುವ ನಿರ್ಧಾರದ ಘಟನೋತ್ತರ ಅನುಮತಿ ಪಡೆಯುವಂತೆಯೂ ಸಚಿವರು ಸೂಚಿಸಿದ್ದಾರೆ.
ಲಘು ನೀರಾವರಿ ಬೆಳೆ ಬೆಳೆಯಲು ಹಾಗೂ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ಐಸಿಸಿ ಸದಸ್ಯ ಕಾರ್ಯದರ್ಶಿಗಳು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.
ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯ ಬಹುತೇಕ ಭರ್ತಿಯಾಗಿವೆ, ಕಳೆದ ಎರಡು ದಿನಗಳಿಂದ ನಾರಾಯಣಪುರ ಜಲಾಶಯದಿಂದ ಆಂಧಪ್ರದೇಶಕ್ಕೆ ನೀರು ವ್ಯರ್ಥವಾಗಿ ಹೋಗುತ್ತಿದೆ. ಹೀಗಾಗಿ ಕೃಷಿಗಾಗಿ ಕಾಲುವೆಗಳ ಜಾಲಕ್ಕೆ ನೀರು ಹರಿಸುವಂತೆ ರೈತರ ಬೇಡಿಕೆ ಹೆಚ್ಚಾಗಿತ್ತು.
ಹೊರಹರಿವು ಇಳಿಕೆ:
ಮಹಾರಾಷ್ಟ್ರ, ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ 1.25 ಲಕ್ಷ ಕ್ಯುಸೆಕ್ ಇದ್ದ ಹೊರಹರಿವನ್ನು 75 ಸಾವಿರ ಕ್ಯುಸೆಕ್ ಗೆ ತಗ್ಗಿಸಲಾಗಿದೆ.
ಒಳಹರಿವು ಕೂಡಾ ಕಡಿಮೆಯಾಗಿದ್ದು, 1,37,805 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇನ್ನೂ ಜಲಾಶಯದಲ್ಲಿ 517.63 ಮೀವರೆಗೆ ನೀರು ಸಂಗ್ರಹವಿದೆ.