ಡಿವೈಡರ್ ಗೆ ಡಿಕ್ಕಿಯಾದ ಕಾರು; ಏಳು ಮಂದಿ ಸಾವು

ದಾವಣಗೆರೆ.ಜ.೧೪: ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನರು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.ಟಾಟಾ ಇಂಡಿಕಾ ಕಾರಿನಲ್ಲಿ ಬೆಂಗಳೂರುನಿಂದ ಹೊಸಪೇಟೆ ಗೆ ತೆರಳುತ್ತಿದ್ದಾಗ ಘೋರ ದುರಂತ ನಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ ಕರಡಕಲ್ ಗ್ರಾಮದ ಮಲ್ಲನಗೌಡ(೨೨), ಮಾಲಗಟ್ಟಿ ಗ್ರಾಮದ ಸಂತೋಷ (೨೧), ಮಾವಿನಮಟ್ಟಿ ಗ್ರಾಮದ ಸಂಜೀವ್(೨೦), ಹೂವಿನಹಳ್ಳಿಯ ಜೈಭೀಮ್(೧೮), ವಿಜಯಪುರ ಜಿಲ್ಲೆ ತಾಳಿಕೋಟೆಯ ರಘು(೨೩), ವಿಜಯನಗರ ಜಿಲ್ಲೆ ಕೂಡ್ಲಿಗಿಯ ಸಿದ್ದೇಶ್(೨೦), ಈಚಲಬೊಮ್ಮನಹಳ್ಳಿಯ ವೇದಮೂರ್ತಿ(೧೯) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರಿನ ಚಾಲಕ ನಿದ್ದೆಯ ಮಂಪರಿನಲ್ಲಿದ್ದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಜಗಳೂರು ಸಿಪಿಐ ಮಂಜುನಾಥ್ ಪಂಡಿತ್ ಇದ್ದರು.ಶವಗಳನ್ನು ಜಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.