ಡಿವೈಡರ್‌ಗೆ ಬೈಕ್ ಡಿಕ್ಕಿ: ಸವಾರ ಮೃತ್ಯು


ಉಪ್ಪಿನಂಗಡಿ, ಜ.೨೮- ಇಲ್ಲಿನ ರಾಷ್ಟ್ರೀಯ ಹೆದ್ದಾರಿ-೭೫ರಲ್ಲಿ ಅಳವಡಿಸಿದ್ದ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಹಳೇನೇರಂಕಿ ಗ್ರಾಮದ ಕಲ್ಲೇರಿ ನಿವಾಸಿ ದಿ. ವೆಂಕಟೇಶ್ ದೇವಾಡಿಗ ಎಂಬವರ ಪುತ್ರ ಕಿಶೋರ್ (೨೭) ಮೃತ ಬೈಕ್ ಸವಾರ. ಇವರು ತನ್ನ ಬೈಕ್‌ನಲ್ಲಿ ಮಂಗಳೂರಿನಿಂದ ಹಳೇನೇರಂಕಿಗೆ ಬರುತ್ತಿದ್ದಾಗ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ, ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಸಾವನ್ನಪ್ಪಿದ್ದಾರೆ. ಕಿಶೋರ್ ಮಂಗಳೂರಿನ ಖಾಸಗಿ ಡಿಜಿಟಲ್ ಪ್ರಿಂಟಿಂಗ್ ಶಾಪ್‌ನಲ್ಲಿ ಉದ್ಯೋಗಿಯಾಗಿದ್ದು, ಡಿಸೆಂಬರ್ ತಿಂಗಳ ನಾಲ್ಕನೇ ತಾರೀಕಿನಂದು ಕುಂದಾಪುರ ಮೂಲದ ಹುಡುಗಿಯೊಂದಿಗೆ ವಿವಾಹವಾಗಿದ್ದರು. ಕಿಶೋರ್ ರವರ ತಂದೆ ವೆಂಕಟೇಶ್ ದೇವಾಡಿಗ ನಿಧನರಾಗಿದ್ದು, ಮನೆಯಲ್ಲಿರುವ ತಾಯಿ ಮತ್ತು ಇಬ್ಬರು ಸಹೋದರಿಯರ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕುಟುಂಬಕ್ಕೆ ಇವರು ಆಧಾರವಾಗಿದ್ದರು. ಘಟನೆ ಬಗ್ಗೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ರಿಕ್ಷಾ ಚಾಲಕರ ಮಾನವೀಯತೆ
ರಾತ್ರಿ ಸುಮಾರು ೧೨ ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿಯ ಉಪ್ಪಿನಂಗಡಿ ಪೇಟೆ ತಿರುವಿನಲ್ಲಿ ಆಟೋ ರಿಕ್ಷಾ ಬಾಡಿಗೆ ಸಲುವಾಗಿ ನಿಂತಿದ್ದಾಗ ಡಿವೈಡರ್ ಬೈಕ್ ಢಿಕ್ಕಿ ಹೊಡೆದ ಶಬ್ಧ ಕೇಳುತ್ತಲೇ ರಿಕ್ಷಾದಲ್ಲಿದ್ದ ನೆಕ್ಕಿಲಾಡಿಯ ರಿಕ್ಷಾ ಚಾಲಕರಾದ ಖಲಂದರ್ ಶಾಫಿ ಮತ್ತು ಎಂ.ಆರ್. ಮುಸ್ತಫಾ ಸ್ಥಳಕ್ಕೆ ಧಾವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬೈಕ್ ಸವಾರ ಕಿಶೋರ‍್ನನ್ನು ತಮ್ಮ ಅಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.