
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ. 01:- ಚಾಮರಾಜನಗರ ಉಪ ವಿಭಾಗದ ಉಪ ಅಧೀಕ್ಷಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಿಯಾದರ್ಶಿನಿ ಈ ಸಾಣೆಗೊಪ್ಪ ಅವರನ್ನು ರೈತ ಸಂಘÀ, ಪ್ರಗತಿಪರ ಸಂಘಟನೆಗಳು, ಉದ್ಯಮಿಗಳು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಹಾಗೂ ಪೊಲೀಸ್ ಇಲಾಖೆಯಿಂದ ಇಂದು ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೋಡಲಾಯಿತು.
ನಗರದ ಸಿದ್ದಮಲ್ಲೇಶ್ವರ ಮಠದ ಅವರಣದಲ್ಲಿರು ಅನುಭವ ಮಂಟಪ ಕಲ್ಯಾಣ ಮಂಟಪದಲ್ಲಿ ಇಲಾಖೆಯ ವತಿಯಿಂದ ಆಯೋಜನೆ ಮಾಡಿದ್ದ, ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ರೈತ ಸಂಘದ ಮುಖಂಡರು ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಹಸಿರು ಸೇನೆಯ ಅಧ್ಯಕ್ಷ ಹೆಗ್ಗವಾಡಿಪುರ ಮಹೇಶಕುಮಾರ್, ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆಗೆ ಡಿವೈಎಸ್ಪಿಯಾಗಿ ಬಂದ ಪ್ರಿಯಾದರ್ಶಿನಿ ಈ ಸಾಣೆಗೊಪ್ಪಾ ಅವರು ಕಾನೂನು ಸುವಸ್ಥೆಯನ್ನು ಕಾಪಾಡುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಬಡವರು, ರೈತರು ಹಾಗೂ ದೀನ ದಲಿತರಿಗೆ ನ್ಯಾಯ ಕಲ್ಪಿಸಿಕೊಡುವಲ್ಲಿ ಅವರು ಹೆಚ್ಚಿನ ಮುರ್ತುವಜಿ ವಹಿಸುತ್ತಿದ್ದರು. ರೈತ ಸಂಘಟನೆಗಳು ಹಾಗು ಸರ್ಕಾರದ ಪ್ರತಿನಿಧಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವ ಮೂಲಕ ಬಹಳಷ್ಟು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹರಿ ಕಲ್ಪಿಸುವಲ್ಲಿ ಶ್ರಮ ವಹಿಸಿದ್ದಾರೆ.
ಅಪರಾಧ ಪ್ರಕರಣಗಳು, ಇತರೇ ಕೌಟುಂಬಿಕ ವಿಚಾರಗಳು, ಗಲಾಟೆಗಳು ನಡೆದಂತ ಸಂದರ್ಭದಲ್ಲಿ ಬಹಳ ಕುಲಂಕುಷವಾಗಿ ಪರಿಶೀಲನೆ ಮಾಡಿ, ಪ್ರಕರಣ ದಾಖಲು ಮಾಡಿ, ನೊಂದವರಿಗೆ ನ್ಯಾಯ ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತಿದ್ದರು. ಬೆಳಗಾವಿ ಜಿಲ್ಲೆಯಿಂದ ನಮ್ಮ ಜಿಲ್ಲೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸುವ ಜೊತೆಗೆ ನಮ್ಮ ಮನೆ ಮಗಳಂತೆಯಾಗಿದ್ದರು. ಅವರಲ್ಲಿದ್ದ ಪ್ರೀತಿ ವಿಶ್ವಾಸ ಮತ್ತು ಎಲ್ಲರನ್ನು ಅನ್ಯೋನ್ಯತೆಯಿಂದ ತಾನು ಪೊಲೀಸ್ ಅಧಿಕಾರಿ ಎಂಬ ದರ್ಪವನ್ನು ತೋರಿಸದೇ ಸ್ನೇಹಮಯಿಯಾಗಿದ್ದರು. ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ. ಇನ್ನು ಹೆಚ್ಚಿನ ಪದವಿಗಳು ಅವರಿಗೆ ಲಭಿಸಿಲಿ. ಬಡ್ತಿ ಹೊಂದಿ ಮತ್ತೇ ನಮ್ಮ ಚಾಮರಾಜನಗರಕ್ಕೆ ಎಸ್ಪಿಯಾಗಿ ಬರಲಿ ಎಂದು ಮಹೇಶ್‍ಕುಮಾರ್ ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು ಸನ್ಮಾನಿಸಿ ಮಾತನಾಡಿ, ಪ್ರಿಯದರ್ಶಿನಿ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಚೆನ್ನಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಅಷ್ಟೊಂದು ಜನಪ್ರಿಯತೆಯನ್ನು ಎಲ್ಲಾ ವರ್ಗದ ಜನರಿಂದ ಪಡೆದುಕೊಂಡಿದ್ದಾರೆ. ಇಲಾಖೆಗೆ ಗೌರವ ತಂದು ಕೊಡುವ ರೀತಿಯಲ್ಲಿ ಅವರು ಸಮಾನ್ವಾಯತೆಯಿಂದ ಕರ್ತವ್ಯ ನಿರ್ವಹಿಸಿ, ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಅಲ್ಲಿಯು ಸಹ ಇದೇ ರೀತಿ ಉತ್ತಮ ಹೆಸರು ಪಡೆದುಕೊಳ್ಳಲಿ ಎಂದು ಅಶಿಸಿದರು.
ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣೆಗೊಪ್ಪಾ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕರ್ತವ್ಯ ನಿರ್ವಹಿಸಿದ ಚಾಮರಾಜನಗರ ಜಿಲ್ಲೆ ಅತ್ಯಂತ ಇಷ್ಟವಾದ ಮತ್ತು ಪ್ರೀತಿಗೆ ಪಾತ್ರವಾದ ತಾಣವಾಗಿದೆ. ವೈವಿದ್ಯಮಯದಿಂದ ಕೂಡಿರುವ ಜಿಲ್ಲೆಯ ಜನರು ಸಹ ಸ್ನೇಹ ಜೀವಿಗಳು, ಗುಣವಂತರು. ಅವರ ತೋರಿದ ಪ್ರೀತಿ ವಿಶ್ವಾಸದಿಂದಾಗಿ ಇಲಾಖೆಯಲ್ಲಿ ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ದೊರೆಯಿತು. ಜಿಲ್ಲೆಯ ಜನರು ತಮ್ಮ ಮನೆಯ ಮಗಳಂತೆ ನನ್ನನ್ನು ನೋಡಿಕೊಂಡರು. ಮತ್ತೊಮ್ಮೆ ಚಾಮರಾಜನಗರ ಜಿಲ್ಲೆಗೆ ಬರಬೇಕೇಂಬ ಅಭಿಲಾಷೆ ನನ್ನದಾಗಿದೆ. ನಿಮ್ಮೆಲ್ಲರ ಆರೈಕೆಯಿಂದ ಮತ್ತೆ ಜಿಲ್ಲೆಗೆ ಬರುತ್ತೇನೆ ಎಂದು ಪ್ರಿಯಾದರ್ಶಿನಿ ಅವರು ಭಾವುಕರಾದರು.
ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಹುದೇಶ್, ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಶ್ರೀಕಾಂತ್, ಚಿಕ್ಕರಾಜಶೆಟ್ಟಿ, ನಾಜುದ್ದೀನ್, ರೈತದ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಸಿದ್ದರಾಜು, ಹೆಬ್ಬಸೂರು ಬಸವಣ್ಣ, ಮುಡ್ನಾಕೂಡು ಮಹೇಶ್, ಮುಖಂಡರಾದ ಕೋಡಸೋಗೆ ಶಿವಬಸಪ್ಪ, ಡಾ. ಪರಮೇಶ್ವರಪ್ಪ, ವೆಂಕಟರಮಣಸ್ವಾಮಿ, ಆಲೂರು ಪ್ರದೀಪ್, ದೊಡ್ಡರಾಯಪೇಟೆ ಗಿರೀಶ್, ಸಂತೇಮರಹಳ್ಳಿ ಗ್ರಾ.ಪಂ. ಅಧ್ಯಕ್ಷ ಶಂಕರಪ್ಪ, ಹಿರಿಬೇಗೂರು ಗುರುಸ್ವಾಮಿ, ಉಮ್ಮತ್ತೂರು ಬಸವರಾಜು, ಮೊದಲಾಧವರು ಇದ್ದರು.