ಡಿವೈಎಸ್ಪಿ ಕಚೇರಿಗೆ ಸುಣ್ಣ-ಬಣ್ಣದ ಸಿಂಗಾರ

ಮಧುಗಿರಿ, ನ. ೩- ಪಟ್ಟಣದ ಡಬ್ಬಲ್ ರೋಡ್ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ದಸರಾ ಸಂದರ್ಭದಲ್ಲಿ ಸುಣ್ಣ ಬಣ್ಣ, ರಿಪೇರಿ ಕಂಡು ನವ ವಧುವಿನಂತೆ ಶೃಂಗಾರಗೊಂಡಿರುವುದರಿಂದ ಕಚೇರಿ ಇರುವುದು ಸಾರ್ವಜನಿಕರಿಗೆ ಗೋಚರವಾಗುತ್ತಿದೆ.
ಈ ಕಚೇರಿ ಇರುವುದು ಪೊಲೀಸ್ ಇಲಾಖೆಯವರಿಗೆ ಮತ್ತು ಕೆಲವು ಸಾರ್ವಜನಿಕರಿಗೆ ಮಾತ್ರ ತಿಳಿಯುವ ಸ್ಥಿತಿಯಲ್ಲಿತ್ತು.
ಮಧುಗಿರಿ ಡಿವೈಎಸ್‌ಪಿ ಎಂ. ಪ್ರವೀಣ್ ರವರ ಸ್ವಂತ ಖರ್ಚಿನಲ್ಲಿ ಕಟ್ಟಡಕ್ಕೆ ದಸರಾದಂತೆ ಸಿಂಗಾರಗೊಳಿಸಿ ಶೃಂಗರಿಸಲು ಕಾರಣಕರ್ತರಾಗಿದ್ದಾರೆ.
ಈ ಕಚೇರಿಗೆ ತಲುಪಬೇಕಾದರೆ ಜಾಮಿಯಾ ಮಸೀದಿ ಮುಂಭಾಗ ತಿರುವಿನಿಂದ ಬರಬೇಕಿತ್ತು. ಸಾರ್ವಜನಿಕರಿಗೆ ಅನುಕೂಲವಾಗಲೆಂದು “ಯೂ ಟರ್ನ್‌ನ್ನು ಕಚೇರಿಯ ಮುಂಭಾಗದಲ್ಲೇ ಮಾಡಿಸಿ ದ್ದಾರೆ.
ಇನ್ನೂ ಕೊರೊನಾ ಜಾಗೃತಿ ಬಗ್ಗೆ ಪ್ರವೇಶದ್ವಾರದಲ್ಲೇ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನವನ್ನು ಮಾಡಿ ನಾಗರಿಕರ ಪ್ರಶಂಸೆಗೆ ಒಳಗಾಗಿದ್ದಾರೆ. ಈ ಹಿಂದೆ ಇವರು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರು, ಭಿಕ್ಷುಕರು ಇದ್ದ ಸ್ಥಳಕ್ಕೆ ತೆರಳಿ ಸ್ವಯಂ ಊಟ ವಿತರಿಸಿದ್ದನ್ನು ಸಹ ಮರೆಯುವಂತಿಲ್ಲ.
ಇವರ ಹಾದಿಯಲ್ಲೇ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಸರದಾರ್ ಸಹ ಪಟ್ಟಣದಲ್ಲಿ ಅವೈಜ್ಞಾನಿಕವಾಗಿದ್ದ ಪ್ರಮುಖ ವೃತ್ತಗಳನ್ನು ರಿಪೇರಿ ಮಾಡಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವುದು ಮತ್ತು ವೃತ್ತಗಳಿಂದಾಗಿ ನಗರಕ್ಕೆ ಹೊಸ ಮೆರುಗು ತಂದುಕೊಟ್ಟಿದ್ದಾರೆ.