ಡಿವೈಎಫ್‌ಐ ಕಾರ್ಯಕರ್ತನಿಗೆ ಹಲ್ಲೆ: ದುಷ್ಕರ್ಮಿ ವಿರುದ್ಧ ಕ್ರಮಕ್ಕೆ ಮನವಿ

ಕೊಣಾಜೆ, ಡಿ.೨೬- ಹರೇಕಳ ಫರೀದ್ ನಗರದಲ್ಲಿ ಡಿವೈಎಫ್ಐ ಕಾರ್ಯಕರ್ತ, ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಅವರ ಮೇಲೆ ರಾಜಕೀಯ ಕಾರಣ ಮುಂದಿಟ್ಟು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಮುನೀರ್ ಎಂಬಾತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ನಿಯೋಗ ಕೊಣಾಜೆ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿತು.

ಹರೇಕಳ ಗ್ರಾಮದಲ್ಲಿ ಚುನಾವಣೆಯ ದಿನವೂ ಕಾಂಗ್ರೆಸ್ ಕಾರ್ಯಕರ್ತರು ಬೇರೊಂದು ಪಕ್ಷದವರ ಜೊತೆ ರಾಜಕೀಯ ಘರ್ಷಣೆ ನಡೆಸಿದ್ದರು. ಇದೀಗ ಡಿವೈಎಫ್ಐ ಕಾರ್ಯಕರ್ತ, ಗ್ರಾಮ ಪಂ. ಚುನಾವಣೆಯ ಅಭ್ಯರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇಲ್ಲಿ ಹಲ್ಲೆ ನಡೆಸಿದ ಆರೋಪಿಗೆ ರಕ್ಷಣೆ ಕೊಟ್ಟ ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಹಲ್ಲೆಗೊಳಗಾದ ಇಕ್ಬಾಲ್ ವಿರುದ್ಧವೇ ಪ್ರತಿದೂರು ದಾಖಲಾಗುವಂತೆ ಮಾಡಿದ್ದಾರೆ ಎಂದು ನಿಯೋಗ ಆರೋಪಿಸಿದೆ. ಕ್ರಿಮಿನಲ್ ಗಳ ಬೆಂಬಲಕ್ಕೆ ನಿಲ್ಲುವ ಕಾಂಗ್ರೆಸ್ ಮುಖಂಡರ ಈ ಧೋರಣೆ ಅವರ ರಾಜಕೀಯ ಅಧಃಪತನದ ಸಂಕೇತವಾಗಿದೆ. ಪೊಲೀಸ್ ಇಲಾಖೆ ಇಡೀ ಪ್ರಕರಣದ ಸತ್ಯಾಸತ್ಯತೆ ಅರಿತು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕೆಂದು ಡಿವೈಎಫ್ಐ ನಿಯೋಗ ಒತ್ತಾಯಿಸಿತು.

ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಾರ್ಯದರ್ಶಿ ಸುನಿಲ್ ತೇವುಲ, ಉಪಾಧ್ಯಕ್ಷ ಜೀವನ್ ರಾಜ್ ಕುತ್ತಾರ್, ಕೋಶಾಧಿಕಾರಿ ಅಶ್ರಫ್ ಹರೇಕಳ, ಜಿಲ್ಲಾ ಸಮಿತಿ ಉಪಾಧ್ಯಕ್ಷ ರಫೀಕ್ ಹರೇಕಳ, ಬಸ್ಸು ನೌಕರರ ಸಂಘದ ಕಾರ್ಯದರ್ಶಿ ಜಗದೀಶ್ ನಾಯಕ್ ದೇರಳಕಟ್ಟೆ, ಡಿವೈಎಫ್ಐ ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಝ್ ಉರುಮಣೆ, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ನಿಝಾಮ್ ಹರೇಕಳ, ಗ್ರಾಮದ ಹಿರಿಯರಾದ ಉಮರಬ್ಬ, ಅಬ್ದುಲ್ ಸತ್ತಾರ್, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ ಮತ್ತಿತರರು ಉಪಸ್ಥಿತರಿದ್ದರು.