ಡಿವಿಎಸ್ ನಡೆ ಕುತೂಹಲಕ್ಕೆಡೆ

ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದ ಗೌಡರವರು ಇಂದು ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ, ಶಾಸಕ ಕೆ. ಗೋಪಾಲಯ್ಯರವರು ಪುಷ್ಪಮಾಲೆ ಅರ್ಪಿಸಿ ಶುಭಾಶಯ ಕೋರಿದರು. ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಎಂಎಲ್‌ಸಿ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.

ಬೆಂಗಳೂರು, ಮಾ. ೧೮- ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರವಾಗಲೇ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸಲು ಸದಾನಂದಗೌಡ ರವರು ನಾಳೆ ಸುದ್ದಿಗೋಷ್ಠಿ ಕರೆದಿರುವುದು ಮಹತ್ವ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾಳಿನ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಸದಾನಂದಗೌಡ ರವರು ಹೇಳಿದ್ದಾರಲ್ಲದೆ, ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕಿಸಿರುವುದು ನಿಜ ಎಂದು ಹೇಳುವ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸುಳಿವನ್ನು ನೀಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದಗೌಡರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನಿರಾಕರಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಿದ್ದರು. ಈ ಬೆಳವಣಿಗೆ ಸದಾನಂದಗೌಡರಲ್ಲಿ ಅಸಮಾಧಾನ ಮೂಡಿಸಿತ್ತು.
ಕಾಂಗ್ರೆಸ್ ನಾಯಕರು ಅವರನ್ನು ಸಂಪರ್ಕಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲದರ ನಡುವೆಯೇ ಸದಾನಂದಗೌಡ ಅವರು ನಾಳೆ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸದಾನಂದಗೌಡ ಅವರು, ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಈ ಬಗ್ಗೆ ನಾನು ಕುಟುಂಬದರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ನಿನ್ನೆ ತಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಆ ವಿವರಗಳನ್ನು ಹೇಳಲು ಆಗುವುದಿಲ್ಲ. ನಾಳೆ ಎಲ್ಲವನ್ನು ತಿಳಿಸುತ್ತೇನೆ ಎಂದು ಸದಾನಂದಗೌಡ ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಶ್ವರಪ್ಪ ಬಳಿ ಮಾತನಾಡಿದ್ದೇನೆ. ಯಾರಿಗೆಲ್ಲಾ ಅನ್ಯಾಯವಾಗಿದೆಯೋ ಅವರೆಲ್ಲಾ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ ಆದರೆ ಈಶ್ವರಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅವರ ನಿಲುವಿನ ಬಗ್ಗೆ ನಾನೇನು ಹೇಳಲ್ಲ. ನಾಳೆ ನನ್ನ ನಿರ್ಧಾರ ಹೇಳುತ್ತೇನೆ ಎಂದರು.
ರಾಜ್ಯ ರಾಜಕೀಯದಲ್ಲಿ ನನಗೆ ಆಗಿರುವ ಕೆಲವು ಅನ್ಯಾಯಗಳ ಬಗ್ಗೆ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲು ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ. ಈಗಲೇ ನಿರ್ಣಯ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ ಎಂದು ಮಾರ್ಮಿಕವಾಗಿ ಹೇಳಿದರು.