ಡಿವಿಆರ್ ಕ್ಲಬ್ ಬಂದ್‌ಗೆ ಒತ್ತಾಯ

(ಸಂಜೆವಾಣಿ ವಾರ್ತೆ)
ರಾಯಚೂರು,ಏ.೨-
ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಯರಮರ್‍ಸ್ ಬಳಿಯ ಡಿವಿಆರ್ ಕ್ಲಬ್ ಬಂದ್ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಶರಣು ಹೂಗಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಡಿವಿಆರ್ ರಿಕ್ರಿಯೇಷನ್ ಕ್ಲಬ್ ನಲ್ಲಿ ನಿರಂತರ ಜೂಜಾಟ ನಡೆಯುತ್ತಿದೆ. ನಗದು ರೂಪದಲ್ಲಿ ಕೋಟ್ಯಂತರ ರೂ. ಚಲಾವಣೆಯಾಗುತ್ತಿದೆ. ಈ ಅನಧಿಕೃತ ಚಲಾವಣೆ ರಾಯಚೂರು ಲೋಕಸಭಾ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಹಾಗೂ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗುತ್ತಿದೆ ಎಂದು ಹೂಗಾರ್ ಆರೋಪಿಸಿದ್ದಾರೆ.
ಡಿವಿಆರ್ ಕ್ಲಬ್ ನಲ್ಲಿ ಜೂಜಾಟ ಉದ್ದೇಶಕ್ಕಾಗಿ ಗಡಿ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರ ಭಾಗಗಳಿಂದಲೂ ದಿನನಿತ್ಯ ಸಾವಿರಾರು ಜನ ಕ್ಲಬ್‌ಗೆ ಆಗಮಿಸುತ್ತಿದ್ದಾರೆ.
ರಾಯಚೂರು ನಗರ ಸಾಕಷ್ಟು ಲಾಡ್ಜ್‌ಗಳು ಇವರಿಗೆ ಆಶ್ರಯ ತಾಣವಾಗಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಕ್ಲಬ್ ನಿಂದ ಅಧಿಕಾರಿಗಳಿಗೂ ಕೋಟ್ಯಂತರ ರೂ. ಲಂಚ ರೂಪದಲ್ಲಿ ಸಂದಾಯವಾಗುತ್ತಿರುವ ಕುರಿತು ಶಂಕೆ ವ್ಯಕ್ತಗೊಂಡಿದೆ ಎಂದು ಹೂಗಾರ್ ತಿಳಿಸಿದ್ದಾರೆ.
ದಿನನಿತ್ಯ ಡಿವಿಆರ್ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಕ್ಲಬ್‌ನ ಅನಧಿಕೃತ ವ್ಯವಹಾರ ಪ್ರಶ್ನಿಸಿದರೆ ಹೈಕೋರ್ಟ್ ಆದೇಶವಿರುವುದಾಗಿ ನುಣುಚಿಕೊಳ್ಳುತ್ತಿದ್ದಾರೆ ಹಾಗೂ ಬೇಜಾವಬ್ದಾರಿಯಿಂದ ಉತ್ತರಿಸುತ್ತಿದ್ದಾರೆ.
ಹೈಕೋರ್ಟ್ ಆದೇಶ ಕ್ಲಬ್ ನಡೆಸಲು ಷರತ್ತುಗಳನ್ನು ವಿಧಿಸುತ್ತದೆ. ಆದರೆ ಹೈಕೋರ್ಟ್‌ನ ಆದೇಶ ಹಾಗೂ ಷರತ್ತುಗಳು ಉಲ್ಲಂಘನೆಯಾಗುತ್ತಿರುವ ಕುರಿತು ಸ್ಥಳೀಯ ಅಧಿಕಾರಿಗಳು ವರದಿ ಸಲ್ಲಿಸುತ್ತಿದ್ದಾರೆಯೇ ಅಥವಾ ದೂರು ನೀಡುತ್ತಿದ್ದಾರೆಯೇ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಷರತ್ತು ಬದ್ಧ ಆದೇಶ ಪರಿಶೀಲನೆಯಾಗಬೇಕು. ಅದು ಉಲ್ಲಂಘನೆಯಾಗುವುದು ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ಸಂಗ್ರಹಿಸಬೇಕು. ಈ ಮೂಲಕ ಈ ಅನಧಿಕೃತ ಕ್ಲಬ್ ಬಂದ್‌ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಸಾಮಾಜಿಕ ಹೋರಾಟಗಾರ ಶರಣು ಹೂಗಾರ್ ಕ್ಲಬ್‌ನ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದು ಅನಿವಾರ್‍ಯ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.