ಡಿಬಿಟಿ ನಿಲ್ಲಿಸಿ, ಖರೀದಿ ಅಕ್ರಮ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ.ಸೆ.೨೩: ಸ್ಲಂ ಬೋರ್ಡ ಸೇರಿದಂತೆ ಸರ್ಕಾರದ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ತಡೆಯಲು ಆಗ್ರಹಿಸಿ, ಕಾರ್ಮಿಕರ ಹೆಸರಲ್ಲಿ ನಿರಂತರವಾಗಿ ನಡೆಯುತ್ತಿರುವ ಖರೀದಿ ಅಕ್ರಮಗಳನ್ನು ತಡೆದು ತನಿಖೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನಿಂದ ನಗರದ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಿಗೆ ಮನವಿ ರವಾನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಕೆ.ಹೆಚ್.ಆನಂದರಾಜು, ಕೊಳಚೆ ನಿರ್ಮೂಲನೆ ಮಂಡಳಿ ಸೇರಿ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಕ್ರಮವನ್ನು ಕೂಡಲೇ ಕೈ ಬಿಡಬೇಕು. ನೊಂದಣಿಯಾದ ಫಲಾನುಭವಿಗಳಲ್ಲಿ ನೈಜ ಕಟ್ಟಡ ಕಾರ್ಮಿಕರಿದ್ದರೆ ಮಾತ್ರ ಪರಿಶೀಲಿಸಿ ಅವರ ಹೆಸರನ್ನು ಕಲ್ಯಾಣ ಮಂಡಳಿಯ ನೋಂದಣಿ ಉಳಿಸಿಕೊಂಡು ಇತರೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆ ಮೂಲಕ ನೋಂದಣಿಯನ್ನು ಕಾರ್ಮಿಕ ಇಲಾಖೆ ಮೂಲಕ ಮಾಡಿಸಿಕೊಂಡಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮಂಡಳಿಯೇ ಹೂಡಬೇಕು. ಜತೆಗೆ ಇಂತಹ ನೊಂದಣಿಗೆ ಕಾರಣವಾದ ಕಾರ್ಮಿಕ ನಿರೀಕ್ಷಕರು, ಡಿಇಓಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗು ಮಂಡಳಿಯ ನಿಯಮಾವಳಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಿಲ್ಲ. ವಸ್ತುಗಳ ರೂಪದಲ್ಲಿ ಪರಿಹಾರ ಸಾಮಾಗ್ರಿ ನೀಡುವುದನ್ನು ನಿಲ್ಲಿಸದೇ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.ಈ ಬಗ್ಗೆ ತುರ್ತಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಬೆಂಗಳೂರಿನ ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕುವ ಜತೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನೇತ್ರಾವತಿ, ಪುಷ್ಪಲತಾ, ರೇಣುಕಮ್ಮ, ಹೊನ್ನೂರು ಶಿವಣ್ಣ, ಬೇತೂರು ಜಾಕೀರ್, ಹನುಮಂತಪ್ಪ, ಕಕ್ಕರಗೊಳ್ಳ ಜಬೀ, ಬಾನುವಳ್ಳಿ ಇರ್ಫಾನ್ ಇತರರು ಇದ್ದರು.