ಡಿಬಾಸ್ ಅವರಿಂದ ವಿನಯತೆ ಕಲಿತಿದ್ದೇನೆ..

“ಕಣ್ಣು ಹೊಡಿಯಾಕ..
ಮೊನ್ನೆ ಕಲತಾನಿ
ನೀನು ಹೇಳಲಾ ಮಗನಾ
ನಿನ್ನಾ ನೋಡಿ ಸುಮ್ನೆಂಗಿರಲಿ…”

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಬಳಕುತ್ತಾ ಹೆಜ್ಜೆ ಹಾಕಿದ ಬೆಡಗಿ. ಸಿನಿಮಾ ಬಿಡುಗಡೆಯಾಗಿ ದಿನ ಬೆಳಗಾವುದರಲ್ಲಿ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿ ನವತಾರೆಯ ಉದಯ. ಅದರ ಕಿರಣ ಎಲ್ಲೆಡೆ ಪಸರಿಸಿ ಪ್ರತಿಭೆಯ ಬಗ್ಗೆ ಪ್ರಶಂಸೆ, ಮೆಚ್ಚುಗೆಯ ಮಹಾಪೂರ..
ಹೌದು ಅವರೇ ಮಿಸ್ ಸುಪ್ರ ಇಂಟರ್‌ನ್ಯಾಷನಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡತಿ, ಬಾಲಿವುಡ್‌ನಲ್ಲಿ ನಟಿಸಿ ಬಂದರೂ ಬಿಗುಮಾನವಿಲ್ಲದೆ ಕನ್ನಡದ ಭಾಷೆ, ಸಂಸ್ಕೃತಿಯ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಮಾಡೆಲ್ ಕಮ್ ನಟಿ ಆಶಾಭಟ್.
“ರಾಬರ್ಟ್” ಚಿತ್ರದ ಬಳಿಕ ಆಶಾ ಭಟ್ ಪ್ರತಿಭೆಗೆ ನಾಡಿನ ಜನ ಫಿಧಾ. ಸದ್ಯ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಕಥೆ ಕೇಳಿದ್ಧಾರೆ. ಇನ್ನೂ ಅವುಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಮತ್ತಷ್ಟು ಸಿನಿಮಾ ಒಪ್ಪಿಕೊಂಡು ಚಿತ್ರರಂಗದಲ್ಲಿ ಬ್ಯುಸಿಯಾಗುವ ಎಲ್ಲಾ ಲಕ್ಷಣಗಳಿವೆ. ಸಿನಿಮಾ ಪ್ರವೇಶ ಮತ್ತು ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡ ಆಶಾಭಟ್ ಅವರು,ಮಿಸ್ ಸುಪ್ರ ಇಂಟರ್‌ನ್ಯಾಷನಲ್ ಪ್ರಶಸ್ತಿ ಪಡೆದ ನಂತರ ಮುಂಬೈಗೆ ಹೋಗಿದ್ದೆ. ೨೦೧೬ ರಲ್ಲಿ ಒಂದು ವರ್ಷಗಳ ಕಾಲ ಆಡಿಷನ್ ಕೊಟ್ಟಿದೆ. ೨೦೧೭ರಲ್ಲಿ ಹಿಂದಿಯ “ಜಂಗ್ಲಿ’ ಸಿನಿಮಾದ ಮೂಲಕ ಬಣ್ಣದ ಬದುಕು ಆರಂಭವಾಯಿತು. ಆ ಸಿನಿಮಾ ೨೦೧೯ರಲ್ಲಿ ತೆರೆಗೆ ಬಂತು. ಇದಾದ ನಂತರ ಸಿಕ್ಕ ಅವಕಾಶವೇ “ರಾಬರ್ಟ್” ದರ್ಶನ್ ಸಾರ್ ಜೊತೆ ಸಿನಿಮಾ ಅಂದಾಕ್ಷಣ ಒಪ್ಪಿಕೊಂಡೆ. “ರಾಬರ್ಟ್” ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಾಗಿತ್ತು. ಕೊರೊನಾದಿಂದ ಈ ವರ್ಷ ಬಿಡುಗಡೆಯಾಯಿತು. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಜನರು ಸಿನಿಮಾ ಪ್ರೀತಿಯಿಂದ ಸ್ವಾಗತಿಸಿದರು,ಎಲ್ಲೆಡೆ ಹೌಸ್ಪುಲ್ ಪ್ರದರ್ಶನ,ಅದರಲ್ಲಿಯೂ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ನಿರೀಕ್ಷೆಗೆ ಮೀರಿದ್ದು.ಮೊದಲ ಕನ್ನಡ ಚಿತ್ರದಲ್ಲಿ ಸಿಕ್ಕ ಪ್ರತಿಕ್ರಿಯೆ ಮನಸ್ಸಿಗೆ ತೃಪ್ತಿ ಖುಷಿಕೊಟ್ಟಿದೆ.
ದರ್ಶನ್ ಸಾರ್ ಅವರೊಂದಿಗೆ ನಟಿಸಿದ್ದು ಮರೆಯಲಾರದ ಕ್ಷಣ. ಕಲಾವಿದರನ್ನು ಅವರು ನೋಡಿಕೊಳ್ಳುವ ರೀತಿ ಇತರರಿಗೆ ಮಾದರಿ ಮತ್ತು ಸ್ಪೂರ್ತಿ. ಅವರಿಂದ ವಿನಯತೆ ಕಲಿತಿದ್ದೇನೆ, ಮನುಷ್ಯ ಎಷ್ಟು ಹಂಬಲ್ ಆಗಿರುತ್ತಾರೆ ಅಷ್ಟು ವ್ಯಕ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಲಿದೆ. ಎರಡು ದಶಕಗಳಿಗೂ ಅಧಿಕ ಸಿನಿಮಾ ಪ್ರಯಾಣ.ಈ ಅವಧಿಯಲ್ಲಿ ಕಲಾವಿದರನ್ನು ಪ್ರೋತ್ಸಾಹ ಮಾಡುವ ರೀತಿ ಇಷ್ಟವಾಯಿತು.ನನ್ನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುತ್ತೇನೆ. ನನಗೂ ಅವರು ಸ್ಪೂರ್ತಿ.
ಸಿನಿಮಾ ಬಿಡುಗಡೆಯಾದ ನಂತರ ವಯಕ್ತಿಕ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಆದರೆ ನಟಿಯಾಗಿ ಜನರು ನನ್ನನ್ನು ಎಲ್ಲೇ ಹೋದರೂ ಗುರಿತಿಸುತ್ತಾರೆ, ಗೌರವಿಸುತ್ತಾರೆ ಎಂದರು ಆಶಾಭಟ್.

ಬಣ್ಣದ ಬದುಕಿನಲ್ಲಿ ಅವಕಾಶ
ಬಾಲ್ಯದಲ್ಲಿದ್ದಾಗ ನಟಿಯಾಗಬೇಕು ಎನ್ನುವ ಕನಸು ಇರಲಿಲ್ಲ, ಭರತನಾಟ್ಯ, ಸಂಗೀತ ಕಲಿತಿದ್ದೆ.ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಸುಪ್ರ ಇಂಟರ್ನ್ಯಾಷನಲ್ ಪ್ರಶಸ್ತಿ ಬಂದ ನಂತರ ಮುಂಬೈನಲ್ಲಿದ್ದೆ, ಅವಕಾಶಗಳು ಬರತೊಡಗಿದವು, ಸಿನಿಮಾದಲ್ಲಿ ನಾನು ಯಾಕೆ ಪ್ರಯತ್ನ ಮಾಡಬಾರದು ಎನ್ನುವ ಆಲೋಚನೆ ಬಂದಾಗ ಸಿಕ್ಕ ಚಿತ್ರ ಬಾಲಿವುಡ್ನ “ಜಂಗ್ಲಿ. ಆ ಚಿತ್ರ ಬಿಡುಗಡೆಯಾದ ಬಳಿಕ ಸಿಕ್ಕ ಅವಕಾಶವೇ ರಾಬರ್ಟ್. ಈ ಸಿನಿಮಾಗೆ ಸಿಕ್ಕ ಪ್ರೋತ್ಸಾಹ,ಬೆಂಬಲದಿಂದಾಗಿ ಬಣ್ಣದ ಬದುಕಿನಲ್ಲಿ ಮುಂದುರೆಯುವ
ಅವಕಾಶ ಸಿಕ್ಕಿದೆ.
-ಆಶಾ ಭಟ್, ನಟಿ.