ಡಿಪಿಆರ್ ಶೀಘ್ರ ಮಂಜೂರುಗೆ ಒತ್ತಾಯ

ರಾಯಚೂರು, ಮಾ.೨- ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯಿಂದ ಆಂಧ್ರಕ್ಕೆ ಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ರಾಯಚೂರು ಲೋಕ ಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
೨೦೧೯ ರಲ್ಲಿಯೇ ಪತ್ರವನ್ನು ಬರೆದು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ವಿನಂತಿಸಲಾಗಿತ್ತು. ಇದೇ ವಿಷಯವಾಗಿ ಪುನ ಕಳೆದ ಮಾರ್ಚ್ ೨೦೨೧ ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದು ಈ ಹಿಂದೆ ಅನುಮೋದಿತ ರಸ್ತೆಯು ಮಾನ್ವಿ ಚೀಕಲಪರ್ವಿ ಮೂಲಕ ಆಂಧ್ರ ಪ್ರದೇಶಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವುದು ಅತೀ ಅವಶ್ಯವಿದ್ದು.
ಈ ರಸ್ತೆ ನಿರ್ಮಾಣದಿಂದ ೨ ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಶೈಕ್ಷಣಿಕ ವೃದ್ಧಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ೨ ರಾಜ್ಯಗಳ ಗಡಿಭಾಗದ ಪ್ರಯಾಣದ ಅಂತರ ಕಡಿಮೆಯಾಗಿ ದೈನಂದಿನ ಕೆಲಸಕಾರ್ಯಗಳಿಗೆ ತುಂಬಾ ಉಪಯೋಗವಾಗುತ್ತದೆ. ಕಾರಣ ರಾಜ್ಯ ಸರ್ಕಾರದಿಂದ ಸಲ್ಲಿಸಿರುವ ಡಿಪಿಆರ್ ನ್ನು ಶೀಘ್ರವಾಗಿ ಮಂಜೂರು ಮಾಡಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಕೆಲವೊಂದು ಪತ್ರಿಕೆಯಲ್ಲಿ ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಂಸದರು ಕಾಳಜಿ ವಹಿಸುತ್ತಿಲ್ಲ ಎನ್ನುವ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದು, ಜಿಲ್ಲೆಯ, ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದ್ದು, ಪ್ರಸ್ತಾವನೆಗಳನ್ನು ಮಂಜೂರು ಮಾಡಲು ಯಾವಾಗಲೂ ಶ್ರಮಿಸುತ್ತೇನೆ ಎಂದು ತಿಳಿಸಿದರು.