ಡಿನೋಟಿಫಿಕೇಷನ್ ವಿಚಾರಣೆ ಸುಪ್ರೀಂ ತಡೆ ಸಿಎಂ ನಿರಾಳ

ನವದೆಹಲಿ, ಏ. ೫- ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಕ್ರಿಮಿನಲ್ ವಿಚಾರಣೆಯ ತೂಗುಕತ್ತಿಯ ಸಂಕಷ್ಟಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುಪ್ರೀಂ ಕೋರ್ಟ್‌ನಲ್ಲಿಂದು ದೊಡ್ಡ ರಿಲೀಫ್ ಸಿಕ್ಕಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದ ಕ್ರಿಮಿನಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಕೆ.ಎಸ್. ಬೋಪಣ್ಣ, ರಾಮಸುಬ್ರಮಣ್ಯಂ ಇವರುಗಳ ನ್ಯಾಯಪೀಠ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.
ಈ ಹಿಂದೆ ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಉಚ್ಚನ್ಯಾಯಾಲಯ ಈ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿ, ಲೋಕಾಯುಕ್ತ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ತಡೆನೀಡಿದೆ. ನ್ಯಾಯಾಲಯದ ಈ ಆದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಿರಾಳವಾದಂತಾಗಿದೆ.
ಏನಿದು ಪ್ರಕರಣ:
ಈ ಪ್ರಕರಣದ ಸಂಬಂಧ ಉದ್ಯಮಿ ಆಲಂ ಪಾಷ ಎಂಬುವವರು ದೂರು ಸಲ್ಲಿಸಿದ್ದರು. ನಗರದ ಬೆಳ್ಳಂದೂರು, ದೇವರ ಬೀಸನಹಳ್ಳಿ, ವರ್ತೂರು ಸುತ್ತಮುತ್ತಲಿನ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಕೆಐಎಡಿಬಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ಡಿನೋಟಿಫಿಕೇಷನ್ ಮಾಡಿರುವುದು ಅಕ್ರಮ ಎಂದು ದೂರು ದಾಖಲಾಗಿತ್ತು.