ಡಿಡಿಟಿಗಳಿಂದ ಯುವ ಜನತೆ ಮತ್ತು ದೇಶ ನಾಶವಾಗದಿರಲಿ.

ಕೇರಳದ ಕೊಚ್ಚಿನ್ ನದಿಯ ತೀರಕ್ಕೆ ಹೊಂದಿಕೊಂಡ ಸಮುದ್ರದಲ್ಲಿ ಮಾದಕ ವಸ್ತು ನಿಯಂತ್ರಣ ದಳ ನಡೆಸಿದ ದಾಳಿಯಲ್ಲಿ ಸುಮಾರು 15,000 ಕೋಟಿ ಬೆಲೆಬಾಳುವ 2500 ಕೆ.ಜಿಯಷ್ಟು “ಮೆಥ್ಯಾಮ್ ಫೆಟಮೈನ್” ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ವಿಷಯ ತಂದೆ ತಾಯಿಗಳ, ಯುವಕರ, ದೇಶದ ಕಣ್ಣು ತೆರೆಸುವಂತಿದೆ. ಕುಡಿತಕ್ಕಿಂತ ಡ್ರಗ್ಸ್ ತುಂಬಾ ಅಪಾಯಕಾರಿ ಒಮ್ಮೆ ಇದರ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ಸಾಧ್ಯವಿಲ್ಲ.ಈ ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ)ಯೆಂಬ ಮಹಾಮಾರಿ ಯುವ ಜೀವಗಳ ಹರಣ ಮಾಡುವುದಲ್ಲದೇ ಸದ್ಯ ಅವರಲ್ಲಿರುವ ಕಿಂಚಿತ್ತೂ ನೈತಿಕ ಪ್ರಜ್ಞೆ, ಭಯ, ತಪ್ಪಿತಸ್ಥ ಮನೋಭಾವನೆಗಳೆಂಬ “ವಿವೇಕ”ಗಳನ್ನೇ ಕಿತ್ತೆಸೆಯುತ್ತಿದೆ. ಮಕ್ಕಳು, ಮುದುಕರನ್ನು ಸಾಕಬೇಕಾದ ಯುವ ಜನತೆಯ ಹಣ, ಆರೋಗ್ಯ, ಕೌಟುಂಬಿಕ ಶಾಂತಿಯನ್ನು ನಾಶ ಮಾಡುತ್ತಿವೆ. ದಯವಿಟ್ಟು ಇದರ ಬಗ್ಗೆ ಯುವ ಜನತೆ ಮತ್ತು ಇವರ ತಂದೆ ತಾಯಿಗಳು ಎಚ್ಚೆತ್ತುಕೊಳ್ಳಬೇಕು.ಒಂದು ದೇಶವನ್ನು ಸಂಪರ‍್ಣ ನಾಶ ಮಾಡಲು ಅಣುಬಾಂಬ್, ನ್ಯೂಕ್ಲಿಯರ್, ಮಿಸೈಲ್, ಶತೃರಾಷ್ಟ್ರ ಯಾವುದೂ ಬೇಕಿಲ್ಲ. ಆ ದೇಶದ ಯುವಜನತೆಯನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರೆ ಅಷ್ಟೇ ಸಾಕು. ಯುವಕರ ನಾಶದಿಂದ ಆ ನಾಡು ಅನಾಥ ಮಕ್ಕಳ, ವಿಧವೆಯರ, ಮುದುಕರ ಕೊಂಪೆಯಾಗುತ್ತದೆ. ನಮ್ಮ ಸಮಾಜವನ್ನು ದುಶ್ಚಟಗಳ ಹಾವಳಿಯಿಂದ ನಿರ್ನಾಮವಾಗುವುದನ್ನು ತಡೆದು, ದುಶ್ಚಟಮುಕ್ತವಾಗಿಸಿ ಆನಂದ, ಆರೋಗ್ಯ, ಆತ್ಮವಿಶ್ವಾಸದ ಸುಂದರ, ಭವ್ಯ ಸಮಾಜವಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ, ಪ್ರಮುಖವಾಗಿ ಸರ್ಕಾರದ ಕರ್ತವ್ಯ.

 – ಶಿವನಕೆರೆ ಬಸವಲಿಂಗಪ್ಪ