ಡಿಜೆಹಳ್ಳಿ ಕೆಜಿಹಳ್ಳಿ ಗಲಭೆ ಎಸ್​​​ಡಿಪಿಐನ 40ಕ್ಕೂ ಹೆಚ್ಚು ಸದಸ್ಯರು ಭಾಗಿ

ಬೆಂಗಳೂರು,ಫೆ.23-ಕಳೆದ ವರ್ಷ ಆ. 11ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಫೆ. 10ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್​ಶೀಟ್ ಲಭ್ಯವಾಗಿದೆ.
ಫೆ. 10ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಸಲ್ಲಿಸಿರುವ ಚಾರ್ಜ್​ಶೀಟ್ ನಲ್ಲಿ ಗಲಭೆಯಲ್ಲಿ ಇದೂವರೆಗೆ 247 ಮಂದಿ ಆರೋಪಿಗಳ ಬಂಧನವಾಗಿದ್ದು, ಈ ಪೈಕಿ 40ಕ್ಕೂ ಅಧಿಕ ಗಲಭೆಕೋರರು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​​​ಡಿಪಿಐ) ಸಂಘಟನೆಯ ಸದಸ್ಯರಾಗಿದ್ದಾರೆ. ಫೈರೋಜ್ ಪಾಶಾ, ಮೊಹಮ್ಮದ್ ಶರೀಫ್, ಮುಜಾಮಿಲ್ ಪಾಶಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು,‌ ಕೃಷ್ಣ ಜನ್ಮಾಷ್ಟಮಿ ದಿನವನ್ನು ಗುರಿಯಾಗಿಸಿಕೊಂಡಿದ್ದರು. ಇದೇ ವೇಳೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್, ಫೇಸ್​ಬುಕ್​ನಲ್ಲಿ ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದ. ಈ ಪರಿಸ್ಥಿತಿಯನ್ನೇ ಸದುಪಯೋಗಪಡಿಸಿಕೊಂಡ ಆರೋಪಿಗಳು, ಗಲಭೆ ಎಬ್ಬಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಅವಹೇಳನಕಾರಿ ಪೋಸ್ಟ್ ಬೆನ್ನಲ್ಲೇ ಎಸ್​​ಡಿಪಿಐ ಸಂಘಟನೆ ಸದಸ್ಯರು, ಶಾಸಕರ ಮನೆ ಹಾಗೂ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗಳ ಮುಂದೆ ಜಮಾವಣೆಗೊಂಡಿದ್ದರು. ಪ್ರತಿಭಟನಾಕಾರರು ಫೇಸ್​​ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಗಲಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ಮಾಡಿದ್ದರಿಂದ ಹೊರಗಿನಿಂದ ಜನ ಸೇರಲು ಕಾರಣವಾಯಿತು.
ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಒಗ್ಗೂಡಿಸಿದ್ದ ಕಾರ್ಯಕರ್ತರು, ಗಲಭೆ ಎಬ್ಬಿಸಿದ್ದಾರೆ. ಪೊಲೀಸ್​​ ಠಾಣೆಗಳ ಮೇಲಿನ ದಾಳಿಗೆ ಪ್ರೇರಣೆಯಾಗಿದ್ದೂ ಸಹ ಸಾಮಾಜಿಕ ಜಾಲತಾಣವಾಗಿದೆ ಎಂದು ಎನ್‌ಐಎ ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಪ್ರಮುಖ ಅಂಶಗಳಾಗಿ ಉಲ್ಲೇಖಿಸಲಾಗಿದೆ