ಡಿಜಿ ಹಳ್ಳಿ ಕೆಜಿಹಳ್ಳಿ ಗಲಭೆ ಮಾಜಿ ಮೇಯರ್ ಸಂಪತ್ ರಾಜ್ ಸಿಸಿಬಿ ವಶ


ಬೆಂಗಳೂರು,ನ.೪- ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಮೇಯರ್ ಸಂಪತ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಬಾಪ್ಟಿಸ್ಟ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಸಂಪತ್ ರಾಜ್ ನ್ನು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮಾಜಿ ಮೇಯರ್ ಮನೆಗೆ ನೋಟೀಸ್ ಅಂಟಿಸಿ ಸಂಬಂಧಿಕರ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಮಾಹಿತಿ ಪಡೆದು ಸಂಪತ್ ರಾಜ್ ರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಸಂಪತ್ ರಾಜ್ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಸಿಸಿಬಿ ಪೊಲೀಸರು ಇನ್ನಷ್ಟೇ ದೃಢಪಡಿಸಬೇಕಾಗಿದೆ.
ಕಳೆದ ಆಗಸ್ಟ್ ೧೧ರಂದು ರಾತ್ರಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು.ದುರ್ಘಟನೆಯಲ್ಲಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಕೃತ್ಯದ ತನಿಖೆ ನಡೆಸಿದ ಪೊಲೀಸರಿಗೆ ಸಂಪತ್ ರಾಜ್ ಅವರ ಪಾತ್ರವಿರುವುದು ಕಂಡುಬಂದಿದ್ದರಿಂದ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೆಸರು ಸೇರಿಸಿದ್ದರು.
ಕೊರೊನಾ ಸೋಂಕು ತಗುಲಿ ನಗರದ ಬಾಪ್ಟಿಸ್ಟ್ ಆಸ್ಪತ್ರೆಗೆ ೪ ಬಾರಿ ದಾಖಲಾಗಿ ೪ ಬಾರಿ ಡಿಸ್ಚಾರ್ಜ್ ಅಗಿದ್ದ ಸಂಪತ್ ರಾಜ್ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದರು.