ಡಿಜಿಟಲ್ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆ

ಅರಸೀಕೆರೆ, ನ. ೨೨- ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಡಿಜಿಟಲ್ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭ ಮಾಡಿದ್ದು ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲ್ಲೂಕು ಯೋಜನಾ ಕಚೇರಿಯಲ್ಲಿ ಉದ್ಘಾಟಿಸಲಾಯಿತು.
ಹಾಸನ ಜಿಲ್ಲಾ ನಿರ್ದೇಶಕ ಜಯರಾಮ್ ಮಾತನಾಡಿ, ಡಿಜಿಟಲ್ ಸಾಮಾನ್ಯ ಸೇವಾ ಕೇಂದ್ರ ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಮಾರು ೭೦೦ ಸೇವೆಗಳು ಈ ಯೋಜನೆಯಡಿಯಲ್ಲಿ ಲಭ್ಯವಿದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಶ್ರಮ ಯೋಗಿ ಜಾತಿ ಆದಾಯ ಸೇರಿದಂತೆ ಸರ್ಕಾರದ ಹತ್ತು ಹಲವು ಯೋಜನೆ ಅಡಿಯಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದ ಪಿಂಚಣಿ ಯೋಜನೆ ಸೇರಿದಂತೆ ಈ ಸೇವಾ ಕಾರ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಕೆಲಸವನ್ನು ನಮ್ಮ ಸೇವಾ ಪ್ರತಿನಿಧಿಗಳು ಮಾಡಲಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಗಣೇಶ್‌ಮೂರ್ತಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವಾರು ಕಾರ್ಯಕ್ರಮಗಳಿದ್ದು ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ ಎಂದರು.
ತಾಲ್ಲೂಕು ಯೋಜನಾಧಿಕಾರಿ ವಿನಾಯಕ ಪೈ ಮಾತನಾಡಿ, ಈಗಾಗಲೇ ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ರೈತರಿಗೆ ಕೃಷಿ ಉಪಕರಣ, ಆರೋಗ್ಯ ಶಿಕ್ಷಣ, ವಿಮಾ ಯೋಜನೆ ಸೇರಿದಂತೆ ಹತ್ತು ಹಲವಾರು ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿದ್ದು ಪೂಜ್ಯರ ಆದೇಶದ ಮೇರೆಗೆ ಸೇವಾ ಯೋಜನೆಯನ್ನು ತಾಲ್ಲೂಕಿನಲ್ಲಿ ಚಾಲನೆ ಮಾಡಲಾಗಿದೆ.
ನಮ್ಮ ಯೋಜನಾ ಸದಸ್ಯರು ಸೇರಿದಂತೆ ಇತರರಿಗೂ ಸಹ ಇದರ ಉಪಯೋಗವಾಗಲಿದೆ. ಸರ್ಕಾರದ ಯೋಜನೆ ಪಡೆಯಲು ಈ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜನಜಾಗೃತಿ ಉಪಾಧ್ಯಕ್ಷ ಬಂದೂರು ಮಹೇಶ್, ಬಾಣಾವಾರ ಯೋಜನಾಧಿಕಾರಿ ಜಯಂತ್, ಮೇಲ್ವಿಚಾರಕರಾದ ಮಹೇಶ್, ಅಶ್ವಿನಿ, ಜಯಲಕ್ಷ್ಮಿ, ಕಚೇರಿ ಪ್ರಬಂಧಕರಾದ ನೀಲಾವತಿ ಮತ್ತಿತರರು ಉಪಸ್ಥಿತರಿದ್ದರು.