ಡಿಜಿಟಲ್ ವಿಜ್ಞಾನ ಕೇಂದ್ರ ಸದ್ಬಳಕೆಯಾಗಲಿ ವಿದ್ಯಾರ್ಥಿಗಳಿಗೆ: ಜಿಪಂ ಸಿಇಒ ಸಲಹೆ

ರಾಯಚೂರು,ಡಿ.೦೩- ಜಿಲ್ಲೆಯ ಮಸ್ಕಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಭೇಟಿ ನೀಡಿ, ಕಾಮಗಾರಿಗಳನ್ನು ಪರಿಶೀಲಿಸಿದರು.
ಹಾಲಾಪುರದಲ್ಲಿ ನಿರ್ಮಾಣ ಹಂತದ ನೂತನ ಗ್ರಾಮ ಪಂಚಾಯತಿ ಕಟ್ಟಡ ಪರಿಶೀಲಿಸಿ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಲಾಪುರದ ಪ್ರೌಢಶಾಲೆಯ ಆವರಣದಲ್ಲಿ ನರೇಗಾದಡಿ ನಿರ್ಮಿಸಿದ ಬಾಸ್ಕೆಟ್‌ಬಾಲ್ ಗ್ರೌಂಡ್, ಬಿಸಿಯೂಟದ ಕೋಣೆ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಪಾಠ ಆಲಿಸುವುದರ ಜತೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಡಿಜಿಟಲ್ ವಿಜ್ಞಾನ ಕೇಂದ್ರದಲ್ಲಿ ಪ್ರಯೋಗಗಳನ್ನು ಮಾಡಿ ವಿಷಯದಲ್ಲಿ ಪ್ರಭುತ್ವ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಶಿಕ್ಷಕರ ಹಾಜರಾತಿ ಪುಸ್ತಕ ಜತೆಗೆ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು. ಅಡವಿಬಾವಿ ತಾಂಡಾದ ಸರ್ಕಾರಿ ಶಾಲೆ ಆವರಣದಲ್ಲಿ ನರೇಗಾದಡಿ ನಿರ್ಮಿಸುತ್ತಿರುವ ಭೋಜನಾಲಯ, ಜೆ.ಜೆ.ಎಂ ಅಡಿ ನಳಗಳ ಸಂಪರ್ಕ ಕಾಮಗಾರಿ, ನೀರಲೂಟಿ ಸರ್ಕಾರಿ ಶಾಲೆಯ ನಿರ್ಮಾಣ ಹಂತದ ಶೌಚಾಗೃಹಗಳನ್ನು ಪರಿಶೀಲಿಸಿದರು. ಮಾರ್ಗ ಮಧ್ಯೆ ಮಾರಲದಿನ್ನಿ-ಅಂಕುಶದೊಡ್ಡಿ ಮಧ್ಯೆ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿದರು.
ಮಸ್ಕಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್, ಮಸ್ಕಿ ತಾ.ಪಂ ಸಹಾಯಕ ನಿರ್ದೇಶಕರಾದ ಶಿವಾನಂದರೆಡ್ಡಿ, ಪಂಪನಗೌಡ ಪಾಟೀಲ್, ತಾಂತ್ರಿಕ ಸಂಯೋಜಕ ಶಿವಲಿಂಗಯ್ಯ, ಲಿಂಗಸುಗೂರು ತಾಪಂ ಇಒ ಲಕ್ಷೀದೇವಿ ಇತರರು ಉಪಸ್ಥಿತರಿದ್ದರು.