ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಸಲಹೆ

ಹುಳಿಯಾರು, ಜು. ೧- ಗ್ರಾಹಕರು ಬ್ಯಾಂಕ್‌ನಲ್ಲಿ ಸಿಗುವ ಎಲ್ಲ ಸೌಲಭ್ಯ ಪಡೆದುಕೊಂಡು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ತುಮಕೂರಿನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಎಸ್.ಮಿಶ್ರ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಬಳಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಿಂದ ನಡೆದ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯ ಸ್ಯಾಚುರೇಶನ್ ಕುರಿತ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಬ್ಯಾಂಕಿಂಗ್ ಮಾಡುವುದರಿಂದ ಬ್ಯಾಂಕ್‌ಗೆ ಅಲೆಯುವುದು ತಪ್ಪುತ್ತದೆ ಎಂದರು.
ಉಪವ್ಯವಸ್ಥಾಪಕ ವಾದಿರಾಜ್ ಮಾತನಾಡಿ, ಮಹಿಳೆಯರು ಸಾಮಾಜಿಕ ಭದ್ರತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ಗುಂಪು ರಚಿಸಿಕೊಂಡು ಬ್ಯಾಂಕ್ ಪ್ರಯೋಜನ ಪಡೆಯಬೇಕು ಎಂದರು.
ದಾನ ಫೌಂಡೇಶನ್‌ನ ತಿಮ್ಮರಾಜು ಮಾತನಾಡಿ, ಹಳ್ಳಿಗೆ ಬಂದು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗ್ರಾಹಕರ ಸಹಕಾರ ಅಗತ್ಯ ಎಂದರು.
ಆರ್ಥಿಕ ಸಾಕ್ಷರ ಕೇಂದ್ರದ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ, ಸಾಮಾಜಿಕ ಭದ್ರತಾ ಕಾರ್ಯಕ್ರಮದಡಿ ಹೆಚ್ಚು ಜನರು ನೋಂದಾಯಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸತೀಶ್‌ಸಿಂಗ್, ಸಿಬ್ಬಂದಿ ರೇಣುಕಯ್ಯ, ನಿರಂಜನ್, ಸಿಎಸ್‌ಪಿ ಅಧಿಕಾರಿಗಳಾದ ಪ್ರಿಯರಂಜನ್, ಮಾರುತಿ, ಹರಿಬಾಲಕೃಷ್ಣ, ಜಯಣ್ಣ, ರೇಣುಕಸ್ವಾಮಿ ಅರ್ಪಿತ, ರೇಣುಕಾರಾಧ್ಯ, ಶಿವಕುಮಾರ್, ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.