ಡಿಕೆಸು ನಾಮಪತ್ರ ಸಲ್ಲಿಕೆ:ಭರ್ಜರಿ ರೋಡ್ ಶೋ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೨೮:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಭರ್ಜರಿ ರೋಡ್ ಶೋ ಕಾಂಗ್ರೆಸ್‌ನ ವಿರಾಟ್ ಶಕ್ತಿ ಪ್ರದರ್ಶನವನ್ನು ಅನಾವರಣಗೊಳಿಸಿತು.
ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಏ.೨೬ ರಂದು ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ಇಂದು ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆಯ ಆರಂಭದ ಮೊದಲ ದಿನವೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಅವರು ಮೆರವಣಿಗೆಯಲ್ಲಿ ಬಂದು ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ರಾಮನಗರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಭರ್ಜರಿರೋಡ್ ಶೋ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.ಡಿ.ಕೆ ಸುರೇಶ್ ಅವರ ಜತೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಹೆಚ್.ಎಂ ರೇವಣ್ಣ ಕಾಂಗ್ರೆಸ್‌ನ ಶಾಸಕರುಗಳಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ. ಆನೇಕಲ್‌ಶಿವಣ್ಣ, ಹೆಚ್.ಡಿ ರಂಗನಾಥ್, ರಾಷ್ಟ್ರೀಯ ಯುವಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಭಾಗಿಯಾಗಿದ್ದರು. ಹಾಗೆಯೇ ಸಾವಿರಾರು ಕಾರ್ಯಕರ್ತರು, ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ತೆರೆದ ವಾಹನದಲ್ಲಿ ರಾಮನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಡಿ.ಕೆ ಸುರೇಶ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು.

ದೇವರಿಗೆ ವಿಶೇಷ ಪೂಜೆ
ನಾಮಪತ್ರ ಸಲ್ಲಿಕೆಗೂ ಮುನ್ನ ಡಿ.ಕೆ. ಸುರೇಶ್ ಅವರು ಸದಾಶಿವ ನಗರದ ನಿವಾಸದಲ್ಲಿ ತಮ್ಮ ಸಹೋದರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್‌ರವರ ಪಾದಗಳಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು.ನಂತರ ಮನೆ ದೇವರು ಕನಕಪುರದ ಕೆಂಕೇರಮ್ಮ ದೇವಾಲಯ ಹಾಗೂ ಕಬ್ಬಾಳಮ್ಮ, ರಾಮನಗರದ ಚಾಮುಂಡೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.