ಡಿಕೆಶಿ ಹೇಳಿಕೆ ಸಾಂದರ್ಭಿಕ ಎಂದ ಬಿ.ಆರ್

ಕಲಬುರಗಿ ಜು 20 : “ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ ಎನ್ನಲು ತಾವು ಸನ್ಯಾಸಿಯಲ್ಲ”ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಏನಿದ್ದರೂ ಕೇವಲ ಸಾಂದರ್ಭಿಕ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟನೆ ನೀಡಿದರು.
ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯವರ ಕಾರ್ಯಕ್ರಮದಲ್ಲಿ ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಬೇಕಾದರೆ ಡಿಪೆÇ್ಲಮೆಸಿ ಎಂದುಕೊಳ್ಳಬಹುದು ಎಂದು ವ್ಯಾಖ್ಯಾನಿಸಿದರು.
ಇನ್ನು, ಸಿದ್ರಾಮೋತ್ಸವಕ್ಕೆ ನಾವೆಲ್ಲಾ ಹೋಗುತ್ತಿದ್ದೇವೆ. ಸ್ವತಃ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷದ ವತಿಯಿಂದ ಬರ್ತ್ ಡೇ ಆಚರಿಸುವುದಾಗಿ ಸ್ಪಷ್ಟಪಡಿಸಿ ಬಂದಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇದೇನಿದ್ದರೂ ಪಕ್ಷದ ಶಕ್ತಿ ಪ್ರದರ್ಶನಕ್ಕೆ ದೊರೆತಿರುವ ಒಂದು ಅವಕಾಶ ಎಂದರು.
ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರು ಬರ್ತ್ ಡೇ ಆಚರಿಸಿಕೊಳ್ಳುವುದು ಎಷ್ಟು ಸರಿ? ಹಾಗಾದರೆ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದೊಂದಿಗೆ ರಾಜಿ ಮಾಡಿಕೊಂಡಿದ್ದಾರೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ್, ಸಿದ್ದರಾಮಯ್ಯ ಯಾವತ್ತೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದರು.
ಸಿದ್ರಾಮೋತ್ಸವ ಕುರಿತು ಸಚಿವ ಶ್ರೀರಾಮುಲು ಮಂಗಳವಾರ ಕಲಬುರಗಿಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವುದಕ್ಕೂ ಮುನ್ನ ಮುಗುಳ್ನಕ್ಕ ಪಾಟೀಲ್, ರಾಮುಲುಗೆ ಎಷ್ಟು ತಿಳಿಯುತ್ತೋ ಅಷ್ಟು ಮಾತಾಡಿದ್ದಾನೆ ಎಂದು ಲೇವಡಿ ಮಾಡಿದರು.
ಸಚಿವರಾದವರೆಲ್ಲಾ ನಾಯಕರಲ್ಲ. ರಾಮುಲು ಏನಿದ್ದರೂ ಸಾಂದರ್ಭಿಕ ಸಚಿವ ಅಷ್ಟೇ. ಆತನೊಬ್ಬ ನಾಯಕ ಅಲ್ಲ; ಆತ ಕೇವಲ ಆಕ್ಸಿಡೆಂಟಲ್ ಸಚಿವ ಎಂದು ಖಡಕ್ಕಾಗಿ ನುಡಿದರು.