ಡಿಕೆಶಿ ಸಿಎಂ ಮಾಡಲ್ಲ ಸಿದ್ದು ಹೇಳಿಕೆ ವಿವಾದಕ್ಕೆಡೆ

ಬೆಂಗಳೂರು,ಏ.೪:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್‌ರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂದರ್ಶನವೊಂದರಲ್ಲಿ ಹೇಳಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯರವರ ಈ ಮಾತು ಮುಜುಗರ ತಂದಿದ್ದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಅಸ್ತ್ರ ಸಿಕ್ಕಂತಾಗಿದೆ.
ಸಿದ್ದರಾಮಯ್ಯರವರು ತಮ್ಮ ಈ ಹೇಳಿಕೆ ವಿಪರೀತಕ್ಕೆ ಹೋಗುವ ಮೊದಲೇ ಎಚ್ಚೆತ್ತುಕೊಂಡಿದ್ದು, ತಾವು ಈ ರೀತಿ ಮಾತನಾಡಿಲ್ಲ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿ ನನ್ನ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡುವ ಹುನ್ನಾರ ಇದಾಗಿದೆ ಎಂದಿದ್ದಾರೆ.
ಸಿದ್ದರಾಮಯ್ಯರವರ ಹೇಳಿಕೆಗೆ ಕಾಂಗ್ರೆಸ್‌ನ ಯಾವುದೇ ನಾಯಕರು ಇದುವರೆಗೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಆದರೆ, ಹಲವು ಹಿರಿಯ ನಾಯಕರು ಸಿದ್ದರಾಮಯ್ಯರವರ ಮಾತಿಗೆ ಅಸಮಾಧಾನ ಹೊರ ಹಾಕಿದ್ದು, ದೆಹಲಿಯಲ್ಲಿರುವ ಕೆಲವು ನಾಯಕರು ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದು, ಸಿದ್ದರಾಮಯ್ಯರವರಿಗೆ ಈ ರೀತಿ ಮಾತನಾಡದಂತೆ ಹೇಳಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯರವರ ಈ ಮಾತು ಗೊಂದಕ್ಕೆ ಕಾರಣವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಇದೆಲ್ಲ ಬೇಕಾ ಎಂದು ಕೆಲ ನಾಯಕರು ಸಿಟ್ಟುಗೊಂಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯರವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ವ್ಯಂಗ್ಯವಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೂ ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೂ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ನಡೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಹೆಚ್‌ಡಿಕೆ ಹೇಳಿಕೆ
ಸಿದ್ದರಾಮಯ್ಯರವರ ಸಿಎಂ ಹೇಳಿಕೆಗೆ ಟಾಂಗ್ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್ ೧೦೦ ರಿಂದ ೧೨೦ ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್-ಬಿಜೆಪಿ ೬೦-೭೦ ಸ್ಥಾನ ದಾಟುವುದಿಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಖೋಟಾ ದೊಡ್ಡದಿದೆ.ಸಿದ್ದರಾಮಯ್ಯ ನಾನೇ ಸಿಎಂ ಆಗ್ತೀನಿ ಅಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸಿದ್ದು ಸ್ಪಷ್ಟನೆ
ಸಿದ್ದರಾಮಯ್ಯರವರು ತಮ್ಮ ಈ ಹೇಳಿಕೆ ವಿಪರೀತಕ್ಕೆ ಹೋಗುವ ಮೊದಲೇ ಎಚ್ಚೆತ್ತುಕೊಂಡಿದ್ದು, ತಾವು ಈ ರೀತಿ ಮಾತನಾಡಿಲ್ಲ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೆ ನೀಡಿಲ್ಲ. ಪ್ರಜಾಪ್ರಭುತ್ವದಡಿಯಲ್ಲಿ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂದು ಹೇಳಿದ್ದೆ. ಖಾಸಗಿ ಆಂಗ್ಲ ಸುದ್ದಿವಾಹಿನಿ ನನ್ನ ಹೇಳಿಕೆಯನ್ನು ತಿರುಚಿದೆ ಎಂದು ಹೇಳಿದರು.
ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಸಿದ್ದರಾಮಯ್ಯ, ಬಿಜೆಪಿಯ ಶಾಸಕರು ಪ್ರತಿದಿನ ರಾಜೀನಾಮೆ ನೀಡುತ್ತಿರುವ ಈ ಹೊತ್ತಿನಲ್ಲಿ ಅದಾನಿ ಒಡೆತನದ ಎನ್‌ಡಿ ಟಿವಿ, ಸುಳ್ಳು ಸುದ್ದಿಗಳನ್ನು ಹರಡಿ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್‌ರವರನ್ನು ಸಿಎಂ ಮಾಡಲ್ಲ ಎಂಬ ಮಾತನ್ನು ನಾನು ಆಡಿಲ್ಲ. ಇದು ಸತ್ಯಕ್ಕೆ ದೂರವಾದ ಸುದ್ದಿಯಾಗಿದೆ. ನಾನು ಇಂತಹ ಸಣ್ಣತನದ ರಾಜಕಾರಣ ಮಾಡಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲೂ ಹೇಳಿದ್ದಾರೆ.
ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ಕೂಡಿ ಆಯ್ಕೆ ಮಾಡಲಿದೆ ಎಂಬುದನ್ನು ನೂರು ಸಲ ಹೇಳಿದ್ದೇನೆ. ನನ್ನ ಮತ್ತು ಡಿ.ಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷದ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.