ಡಿಕೆಶಿ ಸಿಎಂ ಆಗ್ತಾರೆ:ಯೋಗೇಶ್ವರ ಸ್ವಾಮಿ ಭವಿಷ್ಯ

ಮಂಡ್ಯ,ಡಿ.೯:ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿವೆ ಎಂದು ಕರಿವೃಷಭ ದೇಶೀಕೇಂದ್ರದ ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜಕೀಯ ವಲಯಗಳಲ್ಲಿ ಡಿಕೆಶಿ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯೋಗೇಶ್ವರ ಸ್ವಾಮೀಜಿಯವರ ಭವಿಷ್ಯ ಮಹತ್ವ ಪಡೆದುಕೊಂಡಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಪಟ್ಟದದಮ್ಮ ದೇವಿಯ ದಿಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಡಿ.ಕೆ ಶಿವಕುಮಾರ್‌ರವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಸಿದರು.
ಸಿಎಂ ಆಯ್ಕೆ ವಿಚಾರದಲ್ಲಿ ಮೀಸಲಾತಿ ಪ್ರಕಟಿಸುವುದು ಉತ್ತಮ, ಇದು ಎಲ್ಲರಿಗೂ ಅನುಕೂಲವಾಗಲಿದೆ. ಎಲ್ಲ ಸಮುದಾಯಗಳು ಇನ್ನಷ್ಟು ಹೆಚ್ಚಾಗಿ ಸಂಘಟನೆಯಲ್ಲಿ ಬೆಳೆಯುವವರಿಗೆ ರಾಜಕೀಯದಲ್ಲೂ ಮೀಸಲಾತಿ ಒದಗಿಸಿ ಮುಂದುವರೆಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಡಿ.ಕೆ.ಶಿ ಅವರು ಶ್ರೀ ಮಠದ ಪರಮ ಭಕ್ತರಾಗಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ ಎಂದು ನಮ್ಮ ಸಂಕಲ್ಪವೂ ಆಗಿದೆ ಎಂದು ಹೇಳುವ ಮೂಲಕ ಮತ್ತೆ ಮುಖ್ಯಮಂತ್ರಿ ಹುದ್ದೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.
ಇತ್ತೀಚೆಗಷ್ಟೆ ಮದ್ದೂರು ಶಾಸಕ ಕದಲೂರು ಉದಯ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡ ಡಿಕೆಶಿ ಅವರು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿವಯೋಗೇಶ್ವರ ಸ್ವಾಮೀಜಿ ನುಡಿದಿರುವ ಭವಿಷ್ಯವೂ ರಾಜಕೀಯ ಪಡಸಾಲೆಯಲ್ಲಿ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.