ಬೆಂಗಳೂರು, ಜೂ.೨೭- ಸದ್ಯ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವುದು ಸಮಸ್ತ ಒಕ್ಕಲಿಗರ ಆಶಯ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ.
ಗರದಲ್ಲಿಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡ ಅವರಂತೆ ಇರುವ ಡಿ.ಕೆ.ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಅವರಿಗೆ ಎಲ್ಲಾ ಶಾಸಕರು, ರಾಜಕೀಯ ಮುಖಂಡರು ಸಹಾಯ ಮಾಡಬೇಕು.ಜತೆಗೆ ಈ ಸರ್ಕಾರವೂ ಚೆನ್ನಾಗಿರಬೇಕು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾನದೂತ ಮಹಾಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವೂ ಎಲ್ ಕೆಜಿಯಿಂದ ಪಿಜಿವರೆಗೂ (ಸ್ನಾತಕೋತ್ತರ ಪದವಿ) ನಾಡಪ್ರಭು ಕೆಂಪೇಗೌಡ ಅವರ ಪಠ್ಯವನ್ನು ಕಡ್ಡಾಯವಾಗಿ ಪುಸ್ತಕಗಳಲ್ಲಿ ಅಳವಡಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅದೇ ರೀತಿ, ನಾಡಪ್ರಭು ಕೆಂಪೇಗೌಡ ಅವರ ಫೋಟೊ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು. ಲಾಲ್ ಬಾಗ್ ನಲ್ಲಿ ಗೌಪುರ ವನ್ನು ರಕ್ಷಣೆ ಮಾಡಿ, ಮತ್ತಷ್ಟು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡರಾಗಿ ಬೆಂಗಳೂರು ಇನ್ನಷ್ಟು ಅಭಿವೃದ್ಧಿಗೆ ಮುಂದಾಗಬೇಕು.ಅಲ್ಲದೆ, ನಾವು ಬೆಂಗಳೂರನ್ನು ಸದಾ ನೆನಸಿಕೊಳ್ಳಬೇಕು. ಬೆಂಗಳೂರು ಇಲ್ಲದೇ ಇದ್ದಿದ್ದರೆ ಉತ್ತರ ಕರ್ನಾಟಕದವರು ಇಲ್ಲಿಗೆ ಬರುವಂತೆಯೇ ಆಗುತ್ತಿರಲಿಲ್ಲ ಎಂದರು.
ಮುಂದಿನ ವಾರ್ಷಿಕ ಸಾಲಿನ ಕೆಂಪೇಗೌಡ ಅವರ ಜಯಂತಿ ಸಮಾರಂಭವನ್ನು ಉತ್ತರ ಕರ್ನಾಟಕ ಭಾಗದಲ್ಲಿ ನೆರವೇರಿಸಬೇಕು ಎಂದ ಅವರು, ಕೆಂಪೇಗೌಡರು ಅಂದಿನ ದಿನಗಳಲ್ಲೇ ಸುಂದರ ನಗರದ ಪರಿಕಲ್ಪನೆ ರೂಪಿಸಿದ್ದರು.ಇಂದು ಆ ಮಹಾನಗರ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬೆಂಗಳೂರು ಸಿಲಿಕಾನ್ ಸಿಟಿ, ಉದ್ಯೋಗ ನಗರಿ ಆಗಲೂ ಕೆಂಪೇಗೌಡರ ದೂರದೃಷ್ಟಿಯೇ ಕಾರಣ. ಅವರು ಒಬ್ಬ ದಕ್ಷ ಆಡಳಿತಗಾರರು. ಬೆಂಗಳೂರಿನ ಅಭಿವೃದ್ಧಿಗೆ ಸುಭದ್ರ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ ಎಂದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿದ್ದು, ರಾಜಧಾನಿಯಾಗಿ ಕೋಟ್ಯಂತರ ಮಂದಿಗೆ ಬದುಕು ಕಲ್ಪಿಸಿಕೊಟ್ಟಿದೆ. ಅದಕ್ಕೆ ಕೆಂಪೇಗೌಡರ ಶ್ರಮವೇ ಕಾರಣ. ರಾಜ್ಯದ ಜನತೆ ಅವರನ್ನು ಎಂದೆಂದೂ ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾನದೂತ ಮಹಾಸ್ವಾಮಿ, ಶಾಸಕ ರಿಜ್ವಾನ್ ಆರ್ಶದ್ ಸೇರಿದಂತೆ ಪ್ರಮುಖರಿದ್ದರು.
ಕೆಂಪೇಗೌಡರು ಮತ್ತೆ ನಗರಕ್ಕೆ ಬಂದಿದ್ದಾರೆ..!
ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿಯೇ ಕೆಂಪೇಗೌಡ ಎಂದಿದೆ. ಅಷ್ಟೇ ಅಲ್ಲದೆ, ಕೆಂಪೇಗೌಡರೇ ಮತ್ತೆ ಹುಟ್ಟಿ ಬೆಂಗಳೂರಿಗೆ ಬಂದಂತೆ ಆಗಿದೆ. ಡಿಕೆಶಿ ಅವರ ಹೊಸ ಕಾರ್ಯಕ್ರಮಗಳು ಸಿಲಿಕಾನ್ ಸಿಟಿ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ರಿಜ್ವಾನ್ ಆರ್ಶದ್ ತಿಳಿಸಿದರು.
ಪ್ರಶಸ್ತಿ ಪ್ರದಾನ
ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ.ಈ ಪ್ರಶಸ್ತಿ ಜೊತೆಗೆ ೫ ಲಕ್ಷ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಆರ್ಥಿಕವಾಗಿ ಸಬಲರಾಗಿರುವವರು ಬಿಪಿಎಲ್ ಕಾರ್ಡ್ ಅನ್ನು ಸ್ವಯಂ ಪ್ರೇರಿತವಾಗಿ ನಿರಾಕರಣೆ ಮಾಡಬೇಕು. ಇದರಿಂದ ಅರ್ಹರಿಗೆ ಚಿಕಿತ್ಸೆ, ಯೋಜನೆಗಳು ದೊರೆಯಲಿದ್ದು, ರಾಜ್ಯವೂ ಅಭಿವೃದ್ಧಿ ಆಗಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ.ಮಂಜುನಾಥ್ ಹೇಳಿದರು.