ಡಿಕೆಶಿ ವಿರುದ್ಧ ರಮೇಶ್ ಬೆಂಬಲಿಗರ ಪ್ರತಿಭಟನೆ

ಗೋಕಾಕ, ಮಾ 28: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೋಕಾಕ್ ನಗರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಅಣಕು ಶವಯಾತ್ರೆಯನ್ನು ಮಾಡುವ ಮೂಲಕ ತೀವೃ ಆಕ್ರೋಶವನ್ನು ಹೊರಹಾಕಿದರು.
ನಗರದ ಬಸವೇಶ್ವರ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ರಮೇಶ್ ಬೆಂಬಲಿಗರು ಡಿ.ಕೆ. ಶಿವಕುಮಾರ್ ವಿರದ್ಧ ಘೋಷಣೆಗಳನ್ನು ಕೂಗಿದರು.
ರಾಸಲೀಲೆ ಸಿಡಿಗೆ ಸಂಬಂಧಿಸಿದಂತೆ ರಮೇಶ್ ಅವರ ವಿರುದ್ಧ ದೊಡ್ಡ ಷಡ್ಯಂತ್ರ ರಚಿಸಲಾಗಿದೆ. ಬಲಿಷ್ಟ ನಾಯಕರಾದ ರಮೇಶ್‍ರನ್ನು ಹತ್ತಿಕ್ಕಲು ಡಿ.ಕೆ. ಶಿವಕುಮಾರ ಕುತಂತ್ರ ರೂಪಿಸಿದ್ದಾರೆ. ಅವರನ್ನು ಬಂಧಿಸಬೇಕು. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನೇರವಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಈ ರೀತಿ ಷಡ್ಯಂತ್ರ ರಚಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನಮ್ಮ ನಾಯಕ ರಮೇಶ್‍ಗೆ ನ್ಯಾಯ ಸಿಗುವವರೆಗೂ ನಾನು ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಹಲಗೆಯನ್ನು ಬಾರಿಸುವ ಮೂಲಕ ಪ್ರತಿಭಟನಾಕಾರರು ನಗರದಲ್ಲಿ ಡಿ.ಕೆ. ಶಿವಕುಮಾರ ಅಣಕು ಶವಯಾತ್ರೆಯನ್ನು ಮಾಡಿದರು.