ಡಿಕೆಶಿ ವಿರುದ್ಧ ಎಸ್‌ಟಿಎಸ್ ಕಿಡಿ

ಮೈಸೂರು,ಜ.೯- ಕಮಿಷನ್ ಸರ್ಕಾರ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಾವೂ ಕೂಡ ಅದೇ ಸರ್ಕಾರದಲ್ಲಿದ್ದವನು. ತಮಗೂ ಕೂಡ ಎಲ್ಲವೂ ಗೊತ್ತಿದೆ. ಇದನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಎಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದೀರಿ ಎಂಬುದು ತಮಗೆ ಗೊತ್ತಿದೆ. ಅದನ್ನು ವಿವರವಾಗಿ ಬಹಿರಂಗಪಡಿಸಬೇಕಾಗುತ್ತದೆ. ಈಗ ಈ ವಿಷಯ ಕೆದಕುವುದು ಬೇಡ. ತಾವು ಸರ್ಕಾರದ ಭಾಗವಾಗಿದೆ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಸುಮ್ಮನ್ನಿದ್ದರೆ ಒಳಿತು. ಕಮಿಷನ್ ಸರ್ಕಾರ ಎನ್ನುವುದು ಶೋಭೆ ತರುವ ಮಾತಲ್ಲ. ವಿಪಕ್ಷಗಳು ಇಷ್ಟು ದಿನ ಮಲಗಿದ್ದು, ಈಗ ಏನೋ ಮಾಡಲು ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಖಾರವಾಗ ಪ್ರತಿಕ್ರಿಯಿಸಿದ ಅವರು, ನಾವ್ಯಾರು ಖರೀದಿ ವಸ್ತುಗಳಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಕಾಂಗ್ರೆಸ್ ಪಕ್ಷ ಬಿಡಬೇಕಾಯಿತು ಎಂದು ಅವರು ತಿರುಗೇಟು ನೀಡಿದರು.