ಡಿಕೆಶಿ ವಿರುದ್ಧದ ೫ ಪ್ರಕರಣ ರದ್ದು

ಬೆಂಗಳೂರು,ಜೂ.೧೬- ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿ ರಿಲೀಫ್ ನೀಡಿರುವ ಬೆನ್ನಲ್ಲೇ ಹೈಕೋರ್ಟ್ ಅವರ ವಿರುದ್ಧ ದಾಖಲಾಗಿದ್ದ ಐದು ಪ್ರಕರಣಗಳನ್ನು ರದ್ದು ಗೊಳಿಸುವ ಮೂಲಕ ಬಿಗ್ ರಿಲೀಫ್ ನೀಡಿದೆ.
ಕೋವಿಡ್-೧೯ ತೀವ್ರ ಸ್ವರೂಪದ ವೇಳೆಯಲ್ಲೇ, ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿ ಆದೇಶಿಸಿದೆ.
ಇದಲ್ಲದೇ ಕಾನೂನುಭಂಗದ ಆರೋಪದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೂ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.
ಕಳೆದ ೨೦೨೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಕಾನೂನು ಭಂಗ ಮಾಡಿತ್ತು. ಈ ಹಿನ್ನಲೆಯಲ್ಲಿ ಐದು ಪ್ರಕರಣಗಳು ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದವು.