ಡಿಕೆಶಿ ರಕ್ಷಣೆ ವಿಪಕ್ಷಗಳ ಕಿಡಿ

ಬೆಂಗಳೂರು, ನ. ೨೪- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ತೀರ್ಮಾನ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿದ್ದು, ಈ ತೀರ್ಮಾನ ಸಂಪೂರ್ಣ ಕಾನೂನು ಬಾಹಿರ ಎಂದು ಹೇಳಿವೆ.
ಸರ್ಕಾರದ ತೀರ್ಮಾನಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಈ ಕೂಡಲೇ ಈ ತೀರ್ಮಾನವನ್ನು ಕೈ ಬಿಡುವಂತೆ ಒತ್ತಾಯಿಸಿವೆ.
ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸರ್ಕಾರದ ಈ ತೀರ್ಮಾನದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆಯನ್ನು ವಿಪಕ್ಷಗಳು ನೀಡಿವೆ.
ಅಕ್ಷಮ್ಯ ಅಪರಾಧ: ವಿಜಯೇಂದ್ರ
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಸಂಪೂರ್ಣ ಕಾನೂನು ಬಾಹಿರ. ಈ ರೀತಿಯ ತೀರ್ಮಾನ ಕೈಗೊಂಡಿರುವುದು ಅಕ್ಷಮ್ಯ ಅಪರಾಧ ಎಂದರು.
ಈ ಪ್ರಕರಣದ ಈಗಾಗಲೇ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿವೆ. ಈ ಹಂತದಲ್ಲಿ ಪ್ರಕರಣವನ್ನು ವಾಪಸ್ ಪಡೆಯುವ ತೀರ್ಮಾನ ಸರಿಯಲ್ಲ. ಸರ್ಕಾರದ ನಿರ್ಧಾರ ದುರಾದೃಷ್ಟಕರ ಹಾಗೂ ಕಾನೂನಿಗೆ ವಿರುದ್ಧ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಡಿಕೆಶಿಯವರು ಪ್ರಾಮಾಣಿಕರಾಗಿದ್ದರೆ ಅವರಿಗೆ ಕಾನೂನಿನ ಭಯ ಏಕೆ ಎಂದು ಪ್ರಶ್ನಿಸಿದರು.ಡಿ.ಕೆ. ಶಿವಕುಮಾರ್ ಪ್ರಾಮಾಣಿಕರಾಗಿದ್ದರೆ ಸಚಿವ ಸಂಪುಟದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಲಿ. ಡಿ.ಕೆ. ಶಿವಕುಮಾರ್ ಅವರಿಗೆ ತಾವು ಸತ್ಯಹರಿಶ್ಚಂದ್ರರು ಎಂದು ಸಾಬೀತುಪಡಿಸಲು ಒಂದು ಸುವರ್ಣಾವಕಾಶ ಸಿಕ್ಕಿದೆ ಎಂದು ಅವರು ಹೇಳಿದರು.ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದ್ದು, ಯಾವ ರೀತಿಯ ಹೋರಾಟ ನಡೆಸಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುವುದಾಗಿಯೂ ಅವರು ಹೇಳಿದರು.ಬಿಜೆಪಿ ಸರ್ಕಾರ ಇದ್ದಾಗ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ವಹಿಸಿದ್ದರ ಹಿಂದೆ ಯಾವುದೇ ರಾಜಕೀಯ ಸೇಡು ಇರಲಿಲ್ಲ. ಐಟಿ ದಾಳಿಯಾದಾಗ ಕರ್ನಾಟಕ ರಾಜ್ಯ ಮತ್ತು ಬೇರೆ ಬೇರೆ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೆ ರಾಜ್ಯದ ಜನತೆಯೇ ಸಾಕ್ಷಿ ಇದ್ದಾರೆ. ಹಾಗಾಗಿಯೇ ಮೇಲ್ನೋಟಕ್ಕೆ ಅಕ್ರಮ ಆಸ್ತಿ ಗಳಿಕೆ ಸಾಬೀತಾಗಿದ್ದರಿಂದ ಅಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿದ್ದನ್ನು ಸಮರ್ಥಿಸಿಕೊಂಡರು.
ಡಿ.ಕೆ. ಶಿವಕುಮಾರ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬುದು ರಾಜ್ಯದ ಜನತೆಗೆ ಐಟಿ ದಾಳಿ ಸಂದರ್ಭದಲ್ಲಿ ಗೊತ್ತಾಗಿತ್ತು. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ತೀರ್ಮಾನ ಮಾಡಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಬಾರದು ಎಂದು ಅವರು ಒತ್ತಾಯಿಸಿದರು.
ಸಿಬಿಐ ತನಿಖೆಯ ಅನುಮತಿಯನ್ನು ವಾಪಸ್ ಪಡೆಯುವ ತೀರ್ಮಾನದ ಮೂಲಕ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಯಾವ ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಡಿಕೆಶಿ ಅಕ್ರಮ ಆಸ್ತಿಯ ಬಗ್ಗೆ ಸಿಬಿಐ, ಐಟಿ, ಇಡಿ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಹಂತದಲ್ಲಿ ಸಚಿವ ಸಂಪುಟ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಕೂಡಲೇ ಈ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸುವುದಾಗಿ ವಿಜಯೇಂದ್ರ ಹೇಳಿದರು.
ಹೆಚ್‌ಡಿಕೆ ಟೀಕೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣದ ಅನುಮತಿಯನ್ನು ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಈ ಸರ್ಕಾರ ದರೋಡೆಕೋರರನ್ನು ರಕ್ಷಣೆ ಮಾಡಲು ಇರುವ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರಾಗಿ ಕೆಲಸ ಮಾಡಿದ್ದಾರೆ. ಈಗ ವಾಪಸ್ ಪಡೆದಿರುವ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ೨ ಬಾರಿ ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್ ನೀಡಿದ ಹಲವು ತೀರ್ಪುಗಳು ನಮ್ಮ ಕಣ್ಣ ಮುಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಈ ರೀತಿಯ ನಿರ್ಧಾರ ಕೈಗೊಂಡಿರುವುದು ತಪ್ಪು ಎಂದರು.
ಈ ತೀರ್ಮಾನ ಕೈಗೊಳ್ಳುವ ಮೂಲಕ ಕಾಂಗ್ರೆಸ್‌ನವರು ನಾನು ಕಾನೂನಿಗೆ ದೊಡ್ಡವರು ಎಂದು ಪ್ರದರ್ಶನ ಮಾಡಲು ಹೊರಟಿದ್ದಾರೆ. ಲೂಟಿ ಮಾಡುವವರಿಗೆ ನಮ್ಮ ಸರ್ಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ಹರಿಹಾಯ್ದರು.
ಮರ್ಯಾದೆ ಇದ್ದವರು ಹೆದರುತ್ತಾರೆ. ಮರ್ಯಾದೆ ಇಲ್ಲದವರಿಗೆ ಪ್ರಕರಣ ನ್ಯಾಯಲಯದಲ್ಲಿ ಇದ್ದರೇನೂ, ಬಿಟ್ಟರೇನೂ ಯಾವ ತೀರ್ಮಾನ ಬೇಕಾದರೂ ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರ ಇದೆ ಎಂದು ಯಾವ ತೀರ್ಮಾನ ಬೇಕಾದರೂ ಮಾಡಬಹುದು. ಎಲ್ಲವನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎಂಬ ದುರಂಹಕಾರದಲ್ಲಿ ಕೆಲವರು ಇದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಈಶ್ವರಪ್ಪ ಕಿಡಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆಯುವ ತೀರ್ಮಾನ ಮಾಡದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ. ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುವುದು ನಿಶ್ಚಿತ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ರೀತಿಯ ತೀರ್ಮಾನ ಕೈಗೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ. ಡಿ.ಕೆ. ಶಿವಕುಮಾರ್ ಅವರನ್ನು ಉಳಿಸಲು ಸಿದ್ದರಾಮಯ್ಯ ಕಪ್ಪುಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿರುವಾಗ ಈ ರೀತಿಯ ತೀರ್ಮಾನ ಮಾಡಿರುವುದು ಸರಿಯಲ್ಲ. ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದೆ. ಕೇಡಿ ಸಿದ್ದು ಅವರ ದರೋಡೆಕೋರರ ತಂಡ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಈಶ್ವರಪ್ಪ ಹರಿಹಾಯ್ದರು.
ಸಚಿವ ಸಂಪುಟವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿ.ಕೆ. ಶಿವಕುಮಾರ್. ನಮಗೂ ಇಂತಹ ಸ್ಥಿತಿ ಮುಂದೆ ಬರಬಹುದು ಎಂದು ಕೇಂದ್ರದ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಇದಕ್ಕೆ ಒಪ್ಪಿಕೊಂಡಿರಬಹುದು. ಸಿದ್ದರಾಮಯ್ಯನವರಿಗೆ ಕುರ್ಚಿ ಮುಖ್ಯವಾಗಿದೆ ಎಂದು ಟೀಕಿಸಿದರು.
ಸಂವಿಧಾನ, ನ್ಯಾಯಾಂಗದ ಬಗ್ಗೆ ಉದ್ದುದ ಭಾಷಣ ಮಾಡುವ ಕಾಂಗ್ರೆಸ್ ನಾಯಕರಿಗೆ ಈ ರೀತಿಯ ತೀರ್ಮಾನ ಮಾಡುವುದು ಸರಿಯಲ್ಲ ಎಂಬುದು ಗೊತ್ತಿಲ್ಲವೇ, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು ಎಂದು ಅವರು ಆಕ್ರೋಶ ಹೊರ ಹಾಕಿದರು.
ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ತೀರ್ಮಾನವನ್ನು ಕೈ ಬಿಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ತೀರ್ಮಾನ ನ್ಯಾಯಾಲಯಕ್ಕೆ ಬಿಟ್ಟದ್ದು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಗೆ ನೀಡಿರುವ ಅನುಮತಿ ವಾಪಸ್ ಪಡೆಯುವ ಸಚಿವ ಸಂಪುಟದ ತೀರ್ಮಾನವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಮುಂದೆ ನ್ಯಾಯಾಲಯ ಏನು ಮಾಡುತ್ತೋ, ಸಿಬಿಐ ಏನು ಮಾಡುತ್ತೋ ಕಾದು ನೋಡಬೇಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸರ್ಕಾರದ ತೀರ್ಮಾನದ ಬಗ್ಗೆ ವಿರೋಧ ಪಕ್ಷದ ನಾಯಕರ ವ್ಯಾಖ್ಯಾನ ಅವರಿಗೆ ಬಿಟ್ಟದ್ದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಒಂದು ತೀರ್ಮಾನ ಮಾಡಿದೆ. ಆ ತೀರ್ಮಾನವನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯಾಲಯ ಏನು ಮಾಡುತ್ತದೆ ಎಂಬುದನ್ನು ನಾವು ಈಗಲೇ ಹೇಳಲು ಆಗದು ಎಂದರು.
ಸರ್ಕಾರದ ತೀರ್ಮಾನದ ವಿರುದ್ಧ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಮೌಖಿಕವಾಗಿ ಸೂಚನೆ ಕೊಟ್ಟಿದ್ದರು. ಆಗ ಅದು ರಾಜಕೀಯ ಪ್ರೇರಿತ ಆಗಿರಲಿಲ್ಲವೇ ಎಂದು ತಿರುಗೇಟು ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ತೀರ್ಮಾನವನ್ನು ಕಾನೂನಿನ ಚೌಕಟ್ಟಿನಲ್ಲೇ ಮಾಡಿದ್ದೇವೆ. ಆವತ್ತಿನ ಅಂದರೆ ಬಿಜೆಪಿ ಸರ್ಕಾರದ ಅಡ್ವೊಕೇಟ್ ಜನರಲ್ ಅವರೇ ಅದನ್ನು ಹೇಳಿದ್ದಾರೆ. ಈಗಿನ ಆಡ್ವೊಕೇಟ್ ಜನರಲ್ ಕೂಡಾ ಅದನ್ನೇ ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲೇ ಈ ತೀರ್ಮಾನ ಮಾಡಲಾಗಿದೆ. ಮುಂದಿನದ್ದು ನ್ಯಾಯಾಲಯಕ್ಕೆ ಬಿಟ್ಟದು ಎಂದರು.

ಡಿಕೆಶಿ ಪ್ರತಿಕ್ರಿಯೆ
ನನ್ನ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ಬಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೇನೆ. ಚುನಾವಣಾ ಪ್ರಚಾರಕ್ಕಾಗಿ ನಾನು ತೆಲಂಗಾಣಕ್ಕೆ ಹೋಗಿದ್ದೆ. ಹಾಗಾಗಿ ನಿನ್ನೆ ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
೨೯ ರಂದು ನ್ಯಾಯಾಲಯಕ್ಕೆ ಮಾಹಿತಿ
ಹಿಂದಿನ ಬಿಜೆಪಿ ಸರ್ಕಾರ ತಮ್ಮ ಮೇಲಿನ ಪ್ರಕರಣವನ್ನು ಸಿಬಿಐಗೆ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇದೇ ತಿಂಗಳ ೨೯ ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಅಂದು ನಡೆಯುವ ವಿಚಾರಣೆ ವೇಳೆ ಸರ್ಕಾರ ಸಚಿವ ಸಂಪುಟದ ತೀರ್ಮಾನವನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.