ಡಿಕೆಶಿ ಮೇಲಿನ ಕೋಪ ಸತೀಶ್‌ಗೆ ಶಾಪ

ಬೆಂಗಳೂರು, ಏ. ೬- ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಪಾಠ ಕಲಿಸಲು ೩ ಮಂದಿ ಜಾರಕಿಹೊಳಿ ಸಹೋದರರು ಒಂದಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪರ್ಧೆಯಲ್ಲಿದ್ದು, ಇವರ ಸಹೋದರರುಗಳಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಲು ಪಣ ತೊಟ್ಟಿದ್ದಾರೆ.
ಬಿಜೆಪಿ ಶಾಸಕರುಗಳಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಸತೀಶ್ ಜಾರಕಿಹೊಳಿ ವಿರುದ್ಧ ಸೆಡೆದು ನಿಂತಿದ್ದಾರೆ, ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಲಗೈ ಬಂಟರಾಗಿದ್ದ ಅವರ ಸಹೋದರ ಲಖನ್ ಜಾರಕಿಹೊಳಿ ತಮ್ಮ ಸಹೋದರರ ಜತೆ ಕೈ ಜೋಡಿಸಿ ಬಿಜೆಪಿ ಪಾಳೇಯದಲ್ಲಿ ಗುರ್ತಿಸಿಕೊಂಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ರಾಜಕೀಯ ಹಗೆತನ ತಾಳಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಪಾಠ ಕಲಿಸಲೆಂದೇ ಈ ಮೂವರು ಸಹೋದರರು ಒಂದಾಗಿದ್ದಾರೆ ಎನ್ನಲಾಗಿದೆ.
ಗೋಕಾಕ್‌ನ ಲಖನ್ ಜಾರಕಿಹೊಳಿ ಅವರ ಮನೆಗೆ ಸಚಿವರುಗಳಾದ ಜಗದೀಶ್‌ಶೆಟ್ಟರ್, ಉಮೇಶ್‌ಕತ್ತಿ, ಬೈರತಿ ಬಸವರಾಜು, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಭೇಟಿ ನೀಡಿ. ಬಿಜೆಪಿಗೆ ಬೆಂಬಲ ಕೋರಿದ್ದು, ಅದರಂತೆ ಲಖನ್ ಜಾರಕಿಹೊಳಿ ಬಿಜೆಪಿ ಪಾಳೇಯಕ್ಕೆ ಜಿಗಿದು ತಮ್ಮ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೇ ತೊಡೆ ತಟ್ಟಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ದ ರೊಚ್ಚಿಗೆದ್ದಿರುವ ಈ ಮೂವರು ಸಹೋದರರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷರ ನಾಯಕತ್ವಕ್ಕೆ ಧಕ್ಕೆ ತರುವ ಲೆಕ್ಕಾಚಾರ ಇವರದ್ದಾಗಿದೆ.
ಸಿಎಂ ಪ್ರಚಾರ
ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಚಾರ ಕಾವೇರುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಬೆಳಗಾವಿ ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಬೆಳಗಾವಿಗೆ ತೆರಳಿ ಅಲ್ಲಿಯೇ ಮೊಕ್ಕಾಂ ಹೂಡಿ ನಾಳೆ ಅವರು ರಾಮದುರ್ಗ ಬೈಲಹೊಂಗಲ, ಸವದತ್ತಿ, ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸುವರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಸಹ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಕಾಂಗ್ರೆಸ್‌ನ ಪ್ರಮುಖ ಮುಖಂಡರುಗಳು ಈಗಾಗಲೇ ಬೆಳಗಾವಿಯಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ.
ಮಸ್ಕಿ, ಬಸವಕಲ್ಯಾಣದಲ್ಲೂ ಬಿರುಸು
ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರವು ಬಿರುಸಾಗಿದ್ದು, ಮಸ್ಕಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದು, ಬಿಜೆಪಿ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಪ್ರಚಾರದ ನೇತೃತ್ವದ ವಹಿಸಿಕೊಂಡು ಎಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಬಸವಕಲ್ಯಾಣದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪೈಪೋಟಿಯಂತೆ ಪ್ರಚಾರದಲ್ಲಿ ತೊಡಗಿವೆ. ಇಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಮಲ್ಲಿಕಾರ್ಜುನಖೂಬಾ ಸಹ ಅಬ್ಬರದ ಪ್ರಚಾರ ನಡೆಸಿದ್ದು, ಗೆಲುವಿಗಾಗಿ ಪೈಪೋಟಿ ಹೆಚ್ಚಿದೆ.