ಡಿಕೆಶಿ ನಾಮಪತ್ರ ಅಂಗೀಕಾರ

ಬೆಂಗಳೂರು,ಏ.೨೧:ತೀವ್ರ ಕುತೂಹಲ ಕೆರಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ನಾಮಪತ್ರ ಕ್ರಮಬದ್ಧವಾಗಿದೆ. ಈ ನಾಮಪತ್ರ ಸಿಂಧುಗೊಂಡಿದೆ. ನಾಮಪತ್ರ ಸ್ವೀಕೃತಗೊಂಡಿದೆ. ಇದರಿಂದ ನಾಮಪತ್ರ ತಿರಸ್ಕಾರಗೊಳ್ಳುವ ಆತಂಕದಲ್ಲಿದ್ದ ಡಿ.ಕೆ. ಶಿವಕುಮಾರ್‌ಗೆ ಈಗ ನಿರಾಳಗೊಂಡಿದ್ದಾರೆ.
ಕನಕಪುರ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರದ ಸಿಂಧುತ್ವವನ್ನು ಘೋಷಿಸಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್‌ರವರ ಚುನಾವಣೆ ಸ್ಪರ್ಧೆಯ ಬಗ್ಗೆ ಇದ್ದ ಅನುಮಾನಗಳು ದೂರವಾದಂತಾಗಿದೆ.
ಕನಕಪುರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ರವರ ನಾಮಪತ್ರವನ್ನು ಅಸಿಂಧುಗೊಳಿಸಿ ತಿರಸ್ಕೃತಗೊಳಿಸುವ ಸಂಚನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ, ಮುನ್ನೆಚ್ಚೆರಿಕೆ ಕ್ರಮವಾಗಿ ಸಂಸದ ಡಿ.ಕೆ. ಸುರೇಶ್‌ರವರು ನಿನ್ನೆ ಕಡೇ ಘಳಿಗೆಯಲ್ಲಿ ಕನಕಪುರದಲ್ಲಿ ನಾಮಪತ್ರವನ್ನು ಸಲ್ಲಿಸಿದ್ದರು. ಈಗ ಡಿ.ಕೆ. ಶಿವಕುಮಾರ್‌ರವರ ನಾಮಪತ್ರ ಸಿಂಧು ಆಗಿರುವುದರಿಂದ ಡಿ.ಕೆ. ಸುರೇಶ್ ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ.
ಇಂದು ಬೆಳಿಗ್ಗೆ ಸಹ ಡಿ.ಕೆ. ಶಿವಕುಮಾರ್, ತಮ್ಮ ವಿರುದ್ಧ ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿದ್ದಾರೆ. ತಮ್ಮನ್ನು ರಾಜಕೀಯದಿಂದಲೇ ತೆಗೆಯುವ ಸಂಚು ನಡೆಸಿದ್ದಾರೆ ಎಂದೆಲ್ಲ ಆರೋಪಿಸಿ ತಮ್ಮ ನಾಮಪತ್ರವನ್ನು ತಿರಸ್ಕರಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದರು.
ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಿನ್ನೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇಂದು ನಾಮಪತ್ರಗಳ ಪರಿಶೀಲನೆ ನಡೆಯಿತು.