
ಬೆಂಗಳೂರು, ನ. ೭- ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಕಳುಹಿಸಿದ್ದು, ಅದರಂತೆ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿರುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ಡಿಕೆ ಶಿವಕುಮಾರ್‌ರವರ ದೆಹಲಿ ಭೇಟಿ ಪಕ್ಷದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಿಢೀರ್ ಎಂದು ವರಿಷ್ಠರು ಡಿಕೆಶಿ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ವರಿಷ್ಠರನ್ನು ಭೇಟಿ ಮಾಡಿದರು. ಸಮಯ ಸಿಕ್ಕರೆ ಸೋನಿಯಾಗಾಂಧಿಯವರು ಭೇಟಿ ಮಾಡಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿದ್ದು, ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವರು ಎಂದು ಕೆಲ ಶಾಸಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಖುದ್ಧು ಹೇಳಿಕೆ ನೀಡುವ ಜತೆಗೆ ಸಿದ್ಧರಾಮಯ್ಯ ಬೆಂಬಲಕ್ಕೆ ಹಲವು ಸಚಿವರು ನಿಂತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅದರಂತೆ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.ಮುಂದೆ ಸಿದ್ಧರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ಕಳುಹಿಸಬಹುದು. ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕ ಬಂದ ಕಾಂಗ್ರೆಸ್ ಸರ್ಕಾರ ಆರು ತಿಂಗಳು ಪೂರೈಸುವಷ್ಟರಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗಳು ನಡೆದಿದ್ದು, ಎರಡೂವರೆವರ್ಷ ನಂತರ ಸಿಎಂ ಬದಲಾಗಲಿದ್ದಾರೆ ಎಂಬ ವಿಚಾರ ಕಾಂಗ್ರೆಸ್‌ನಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಸಿಎಂ ಬದಲಾಗಲ್ಲ ಐದು ವರ್ಷ ಸಿದ್ಧರಾಮಯ್ಯ ರವರೇ ಮುಖ್ಯಮಂತ್ರಿ ಎಂಬ ಹೇಳಿಕೆಗಳು ಕಾಂಗ್ರೆಸ್‌ನಲ್ಲಿ ಕಿಚ್ಚು ಹಚ್ಚಿಸಿವೆ. ಇದು ಪಕ್ಷದಲ್ಲಿ ನಾಯಕತ್ವದ ಬಗ್ಗೆ ಭಿನ್ನಾಭಿಪಾಯಗಳಿಗೆ ಕಾರಣಗಳಾಗಿವೆ. ಹಾಗೆಯೇ ವಿಪಕ್ಷಗಳಿಗೂ ಅಸ್ತ್ರದಂತಾಗಿದ್ದು, ನಾಯಕತ್ವದ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಆರೋಪಿಸಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲದಕ್ಕೂ ತೆರೆ ಎಳೆಯಲು ಮುಂದಾಗಿದ್ದು, ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರಿಗೆ ದೆಹಲಿಗೆ ಕರೆಸಿಕೊಂಡು ಹೈಕಮಾಂಡ್ ಕೆಲ ಸಂದೇಶಗಳನ್ನು ನೀಡಲಿದೆ ಎಂದು ಹೇಳಲಾಗಿದೆ.
ಸತೀಶ್ ಜಾರಕಿಹೊಳಿ ಭೇಟಿಯಾದ ಡಿಕೆಶಿ
ಹೈಕಮಾಂಡ್ ಬುಲಾವ್ ಮೇರೆಗೆ ಇಂದು ದೆಹಲಿಗೆ ತೆರಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುವ ಮುನ್ನ ತಮ್ಮ ಮೇಲೆ ಮುನಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಪ್ರೆಸೆಂಟ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸಕ್ಕೆ ತೆರಳಿ ಅವರ ಜತೆ ಸುಮಾರು ಹೊತ್ತು ಚರ್ಚೆ ನಡೆಸಿ ಅಲ್ಲಿಂದಲೇ ನೇರವಾಗಿ ದೆಹಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತೆರಳಿದರು.
ಬೆಳಗಾವಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆಯೇ ಕಳೆದ ವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹೆಚ್.ಸಿ. ಮಹದೇವಪ್ಪ ಅವರ ಜತೆ ಸತೀಶ್ ಜಾರಕಿಹೊಳಿ ಊಟದ ನೆಪದಲ್ಲಿ ಸಭೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಅವರ ಮುನಿಸನ್ನು ತಣಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.ಈ ಬಾರಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ನಾನಲ್ಲ. ೨೦೨೮ ರಲ್ಲಿ ನಾನು ಸಿಎಂ ಸ್ಥಾನ ಕೇಳುತ್ತೇನೆ ಎಂದು ಸತೀಶ್ ಜಾರಕಿಹೊಳಿ ಈಗಾಗಲೇ ಹೇಳಿದ್ದರಲ್ಲದೆ ದಲಿತ ಸಿಎಂ ದಾಳವನ್ನು ಉರುಳಿಸಿದ್ದರು
ರಾಜಕೀಯ ಚರ್ಚೆ
ಡಿ.ಕೆ. ಶಿವಕುಮಾರ್ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿ, ಪಕ್ಷ ಸಂಘಟನೆ ಲೋಕಸಭಾ ಚುನಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಬೆಳಗಾವಿ ವಿಚಾರದಲ್ಲಿ ನಾವೇನು ಮಾತನಾಡಿಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ಬದಲಾವಣೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಹಾಗೂ ಕೆಲ ಜಿಲ್ಲಾಧ್ಯಕ್ಷರ ಬದಲಾವಣೆ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ ಅಷ್ಟೇ. ಅಧಿಕಾರ ಹಂಚಿಕೆಯ ಗೊಂದಲದ ಬಗ್ಗೆ ಚರ್ಚಿಸಲು ಹೈಕಮಾಂಡ್ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಲ್ಲ ಎಂದು ಕಾಂಗ್ರೆಸ್ ಆಪ್ತಮೂಲಗಳು ಸ್ಪಷ್ಟನೆ ನೀಡಿವೆ.ಲೋಕಸಭಾ ಚುನಾವಣೆಗೆ ತಯಾರಾಗಲು ಕೆಪಿಸಿಸಿಗೆ ಹೊಸದಾಗಿ ಕಾರ್ಯಾಧ್ಯಕ್ಷರ ನೇಮಕ ಹಾಗೂ ಕೆಲ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ ಅವಶ್ಯವಿತ್ತು. ಈ ಬಗ್ಗೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಜತೆ ಚರ್ಚಿಸಲು ದೆಹಲಿಗೆ ತೆರೆಳಿದ್ದಾರೆ. ಅವರ ದೆಹಲಿ ಭೇಟಿಗೆ ಏನೆನೋ ಕಲ್ಪಿಸುವುದು ಬೇಡ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.