
ಕನಕಪುರ,ಮೇ.೩- ದೆಹಲಿಯಲ್ಲಿ ಗಾಂಧಿ ಕುಂಟುಂಬಕ್ಕೆ, ಕನಕಪುರದಲ್ಲಿ ಡಿಕೆಶಿ ಕುಟುಂಬಕ್ಕೆ ಮಾತ್ರ ರಾಜಕೀಯ ಅಧಿಕಾರ ದೊರೆತರೆ ಸಾಲದು, ಸಾಮಾನ್ಯ ವ್ಯಕ್ತಿಗೂ ರಾಜಕೀಯ ಶಕ್ತಿ ದೊರೆಕಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಕನಕಪುರ ಹೊರ ವಲಯದ ಮೈಸೂರು ರಸ್ತೆಯಲ್ಲಿನ ಕಾಳೇಗೌಡನದೊಡ್ಡಿ ಬಳಿಯ ಖಾಸಗಿ ತೋಟದ ಮನೆಯೊಂದರಲ್ಲಿ ನಿನ್ನೆ ನಡೆದ ಪ್ಕಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಾವು ವೈಯಕ್ತಿಕವಾಗಿ ಯಾರನ್ನು ದ್ವೇಷಿಸುವುದಿಲ್ಲ, ಮಾತನಾಡುವುದಿಲ್ಲ. ತಮ್ಮ ಅಭಿವೃದ್ಧಿಗೆ ಇಡೀ ಸಮಾಜವನ್ನು ಬಲಿಕೊಡುವ, ವ್ಯವಸ್ಥೆಯನ್ನು ಬುಡಮೇಲು ಮಾಡುವವರ ವಿರುದ್ದ ಮಾತನಾಡುತ್ತೇವೆ ಎಂದರು.
ಡಿಕೆಶಿ ತಾವು ರಾಜಕೀಯವಾಗಿ ಬೆಳೆಯಲು ಬೇರೆಯವರು ರಾಜಕೀಯವಾಗಿ ಬೆಳೆಯದಂತೆ ನೋಡಿಕೊಂಡಿದ್ದಾರೆ. ಇಡೀ ರಾಜಕೀಯ ಶಕ್ತಿ ತಮ್ಮ ಕುಟುಂಬದಲ್ಲೇ ಇರುವಂತೆ ನೋಡಿಕೊಂಡಿದ್ದಾರೆ ಎಂದು ದೂರಿದರು.
ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಗೂಂಡಾಗಿರಿ ಮಾಡಿಕೊಂಡು ರಾಜಕಾರಣ ಮಾಡುತ್ತಿರುವ ಡಿಕೆಶಿ ಸಹೋದರರಿಗೆ ಕುಟುಂಬ ಬಿಟ್ಟು ಯಾರು ರಾಜಕೀಯವಾಗಿ ಬೆಳೆಯುವಂತಿಲ್ಲ.ಇದು ಇವರ ಮತ್ತು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಡಿ ವ್ಯವಸ್ಥೆಯನ್ನು ಡಿಕೆ ಸಹೋದರರು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಇವರ ಕಪಿಮುಷ್ಠಿಯಿಂದ ಕ್ಷೇತ್ರವನ್ನು ಬಿಡುಗಡೆಗೊಳಿಸುವ ಕಾಲ ಸನ್ನಿಹಿತವಾಗಿದೆ, ತಾಲ್ಲೂಕಿನ ಜನತೆ ಈ ಒಂದು ಬದಲಾವಣೆಯನ್ನು ಈ ಬಾರಿ ತರಲಿದ್ದಾರ ಎಂದು ಹೇಳಿದರು.
ನಮ್ಮದು ರಿಯಲ್ ಎಸ್ಟೇಟ್ ಹಣದಲ್ಲಿ ಕಟ್ಟಿದ ಪಕ್ಷವಲ್ಲ, ಕಾರ್ಯಕರ್ತರ ಬೆವರ ಹನಿಯ ಶ್ರಮದ ಹಣದಿಂದ ಕಟ್ಟಿದ ಪಕ್ಷ. ದರ್ಪದಿಂದ ದೇಶಕ್ಕೆ ಎಮರ್ಜೆನ್ಸಿ ತಂದ ಇಂದಿರಾಗಾಂಧಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅವರಿಗಿಂತ ಡಿಕೆಶಿ ದೊಡ್ಡವರಲ್ಲ, ಈ ಬಾರಿ ಇಲ್ಲಿ ಅವರಿಗೂ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.