ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

ಬೆಂಗಳೂರು,ಜು.೧೮-ಕೆಲ ದಿನಗಳ ಹಿಂದಷ್ಟೇ ನಗರ ಹಾಗೂ ಹೊರವಲಯದ ಆರೇಳು ಶಾಲೆಗಳಿಗೆ ಬಾಂಬ್ ಕರೆ ಮಾಡಿ ಆತಂಕಕ್ಕೆ ಎಡೆ ಮಾಡಿಕೊಟ್ಟ ಬೆನ್ನಲ್ಲೇ ಮತ್ತೆ ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ರಾಜರಾಜೇಶ್ವರಿನಗರದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ದುಷ್ಕರ್ಮಿಗಳು ನಿನ್ನೆ ರಾತ್ರಿಯೇ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬಾಂಬ್ ಇಡುವುದಾಗಿ ಇ-ಮೇಲ್ ಮುಖಾಂತರ ಬೆದರಿಕೆ ಹಾಕಿದ್ದಾರೆ.
ಇ-ಮೇಲ್‌ನಲ್ಲಿ ಬಾಂಬ್ ಬೆದರಿಕೆ ಕರೆ ಬಂದಿರುವುದನ್ನು ಇಂದು ಬೆಳಿಗ್ಗೆ
ಗಮನಿಸಿದ ಆಡಳಿತ ಮಂಡಳಿಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಿದ್ದಾರೆ.
ಅಲ್ಲದೇ ಶಾಲೆಗೆ ಬಂದ ೧೫೦ಕ್ಕೂ ಹೆಚ್ಚು ಮಕ್ಕಳನ್ನು ಪಕ್ಕದ ಶಾಲಾ ಕಟ್ಟಡಕ್ಕೆ ಕಳುಹಿಸಿ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿರುವುದು ತಿಳಿದ ಕೂಡಲೇ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.
ಮಕ್ಕಳನ್ನು ಸೇಫ್ ಯೂನಿಟ್ ಗಳಿಗೆ ಶಿಫ್ಟ್ ಮಾಡಿ ಸಂಪೂರ್ಣ ಶಾಲೆಯನ್ನು ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಶಾಲೆಯ ಸುತ್ತಮುತ್ತ,ವಾಹನ ನಿಲುಗಡೆ ಪ್ರದೇಶ ಸೇರಿ ಎಲ್ಲಾ ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ.ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,ಯಾರು ಬೆದರಿಕೆ ಕಳುಹಿಸಿದ್ದಾರೆ, ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತೆ.ಸದ್ಯದ ಮಾಹಿತಿ ಪ್ರಕಾರ ಇದೊಂದು ಶಾಲೆಗೆ ಮಾತ್ರ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ ೮ರಂದು ನಗರದ ಆರು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ- ಮೇಲ್ ಬಂದಿತ್ತು. ಈ ಬೆದರಿಕೆ ಕರೆ ಹಿಂದೆ ಪಾಕಿಸ್ತಾನ, ಸಿರಿಯಾ ದೇಶದ ನಂಟು ಇದೆಯಾ ಎಂಬ ಅನುಮಾನ ಹೆಚ್ಚಾಗಿತ್ತು.
ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಬಿನೈಸರ್ ಸ್ಕೂಲ್‌ಗೆ ಅನಾಮಿಕ ಹೆಸರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು.
ಪ್ರಾಕ್ಸಿ ಸರ್ವರ್ ಬಳಸಿ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. ೮- ೧೦ ಪ್ರಾಕ್ಸಿ ಸರ್ವರ್ ಬಳಸಿರುವುದರಿಂದ ಹಲವಾರು ಲೇಯರ್‌ಗಳಿವೆ. ಒಂದು ಲೇಯರ್ ಪತ್ತೆ ಮಾಡಿದರೆ, ಅದು ಇನ್ನೊಂದು ಲೇಯರ್‌ಗೆ ಕನೆಕ್ಟ್ ಆಗತ್ತೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಇಮೇಲ್ ಮೂಲ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ.
ಐಟಿ ಆಕ್ಟ್, ೬೬ಈ ಅಡಿ ಪ್ರಕರಣ ದಾಖಲಾಗಿದ್ದರಿಂದ ಪ್ರಕರಣಕ್ಕೆ ಗಂಭೀರತೆ ಇದೆ. ತನಿಖೆ ನಡೆಸ್ತಿರುವ ಪೊಲೀಸರಿಗೆ ಎಟಿಸಿಯಿಂದಲೂ ಸಾಥ್ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ ನೀಡಲಾಗಿದೆ. ಆ?ಯಂಟಿ ಟೆರರಿಸಂ ಸೆಲ್ ತನಿಖೆಯನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಮತ್ತೆ ಬೆದರಿಕೆ ಕರೆ ಬಂದಿದೆ.