
ಬೆಂಗಳೂರು, ಮೇ.15- ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ದೆಹಲಿ ಪ್ರವಾಸವನ್ನು ಇಂದು ಹಠಾತ್ ರದ್ದುಪಡಿಸಿದ್ದಾರೆ.
ಶಿವಕುಮಾರ್ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ರದ್ದುಪಡಿಸಿದ್ದಾರೆ.
ಹೊಟ್ಟೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈಗ ವೈದ್ಯರು ಬರುತ್ತಿದ್ದಾರೆ. ನನ್ನನ್ನು ಬಿಟ್ಟು ಬಿಡಿ ಎಂದು ಡಿಕೆಶಿ ಹೇಳಿದ್ದಾರೆ.
ರಕ್ತದೊತ್ತಡ ಏರಿಕೆಯಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯ ಭಗವಾನ್ ಡಿಕೆಶಿಗೆ ಸೂಚಿಸಿದ್ದಾರೆ.
ನೂತನ ಸಿಎಂ ಆಯ್ಕೆ ಹೈಕಮಾಂಡ್ ಅಂಗಳ ತಲುಪಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬರುವಂತೆ ಹೈಮಾಂಡ್ ಸೂಚಿಸಿತ್ತು.
ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಲಾಗಿತ್ತು. ಈ ಸಂಬಂಧ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಖರ್ಗೆ ನಿವಾಸದಲ್ಲಿ ಸಭೆ ರದ್ದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸವನ್ನು ಹಠಾತ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಅಧ್ಯಕ್ಚ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಬೇಕಾಗಿದ್ದ ಸಭೆ ಕೂಡ ರದ್ದಾಗಿದೆ.
ಈಗಾಗಲೇ ದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಜೊತೆ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.