ಡಿಕೆಶಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು,ನ.೨೯-ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ವಾಪಸ್‌ಗೆ ಹೈಕೋರ್ಟ್ ಅನುಮತಿ ನೀಡುವ ಮೂಲಕ ತಾತ್ಕಾಲಿಕ ರಿಲೀಫ್ ನೀಡಿದೆ.ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಏಕಸದಸ್ಯ ನ್ಯಾಯಪೀಠದ ಮುಂದೆ ಸಲ್ಲಿಸಿದ್ದ ಮೇಲ್ಮನವಿ ಹಾಗೂ ರಿಟ್ ಅನ್ನು ಡಿಕೆ ಶಿವಕುಮಾರ್ ವಾಪಸ್ ಪಡೆದಿದ್ದಾರೆ.ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದ ಅನುಮತಿ ನಿರ್ಧಾರ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಆರಂಭಗೊಳ್ಳುತ್ತಿದ್ದಂತೇ ರಾಜ್ಯ ಸರ್ಕಾರದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂತೆಗೆತದ ನಿರ್ಧಾರದ ಲಿಖಿತ ಪ್ರತಿಯನ್ನು ಎಜೆ ಶಶಿಕಿರಣ್ ಶೆಟ್ಟಿ ಸಲ್ಲಿಸಿದರು.ಆ ಬಳಿಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಾದ-ಪ್ರತಿವಾದ ನಡೆದು, ಅಂತಿಮವಾಗಿ ಪಂಜಾಬ್ ಸರ್ಕಾರದ ಕೇಸ್ ಉಲ್ಲೇಖಿಸಿ, ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ವಾಪಾಸ್ ಪಡೆಯಲು ಅನುಮತಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ.ಈ ಮಧ್ಯೆ ಸಿಬಿಐ ಅನುಮತಿ ವಾಪಸ್ ಪಡೆದ ಸರ್ಕಾರದ ಕ್ರಮ ಆಕ್ಷೇಪಿಸಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿಲ್ಲ.ಡಿಕೆ ಶಿವಕುಮಾರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡು ಡಿಕೆಶಿ ಪರ ರಿಟ್ ಅರ್ಜಿಯನ್ನು ಹಿಂಪಡೆಯಲು ನಾವು ಸಿದ್ಧರಿದ್ದೇವೆ ಎಂದು ಪೀಠಕ್ಕೆ ತಿಳಿಸಿದ್ದರು.ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರದ ಕ್ರಮ ಸರಿ ಇದೆಯೋ ಇಲ್ಲವೋ ಎಂಬುದನ್ನು ಸಿಬಿಐ ಪ್ರಶ್ನಿಸಲಿ. ಹೀಗಾಗಿ ಡಿಕೆಶಿವಕುಮಾರ್ ರಿಟ್ ಮತ್ತು ಮೇಲ್ಮನವಿಯನ್ನು ಹಿಂಪಡೆಯುತ್ತಾರೆ ಎಂದರು.ಹೈಕೋರ್ಟ್ ನ್ಯಾಯಮೂರ್ತಿಗಳು ಮೇಲ್ಮನವಿ ಮುಂದುವರೆಸುವ ಉದ್ದೇಶ ಇಲ್ವ ಸರ್ಕಾರ ನಿರ್ಧಾರದಿಂದ ಮೇಲ್ಮನವಿ ಮುಂದುವರೆಸುವ ಉದ್ದೇಶವೇ ಇಲ್ವ ಎಂಬುದಾಗಿ ಡಿಕೆಶಿ ಪರ ವಕೀಲರಿಗೆ ಪ್ರಶ್ನಿಸಿತು.ಆಗ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನಾವು ಡಿಕೆ ಪರ ರಿಟ್ ಅರ್ಜಿ ಹಿಂಪಡೆಯಲು ನಿರ್ಧಿಸಿದ್ದೇವೆ. ರಿಟ್ ಅರ್ಜಿ ಮತ್ತು ರಿಟ್ ಮೇಲ್ಮನವಿ ಇತ್ಯರ್ಥ ಪಡಿಸಬೇಕು. ಸರ್ಕಾರದ ನಿರ್ಧಾರದ ಹಿನ್ನಲೆಯಲ್ಲಿ ಅರ್ಜಿ ಇತ್ಯರ್ಥ ಪಡಿಸಬೇಕು ಎಂಬುದಾಗಿ ಕೋರಿ ಕೊಂಡರು.
ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ, ಸರ್ಕಾರದ ನಿರ್ಧಾರದ ಮೂಲಕ ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುತ್ತಿದೆ. ಸಿಬಿಐ ತನಿಖೆಯು ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಒಮ್ಮೆ ನೀಡಿದ ಒಪ್ಪಿಗೆಯನ್ನು ಸರ್ಕಾರ ಹಿಂಪಡೆಯುವಂತಿಲ್ಲ ಎಂದರು.
ಸುಪ್ರೀಂಕೋರ್ಟ್ ತೀರ್ಪನ್ನು ಓದುವಂತೆ ನ್ಯಾ.ಕೃಷ್ಣ ದೀಕ್ಷಿತ್ ಸಿಬಿಐ ಪರ ವಕೀಲರಿಗೆ ಸೂಚನೆ ನೀಡಿದ್ದರು. ಸರ್ಕಾರ ಒಪ್ಪಿಗೆ ಹಿಂಪಡೆದಿದ್ದರು ಕೂಡಾ ಸಿಬಿಐ ತನಿಖೆ ಮುಂದುವರಿಸಬಹುದು. ಸುಪ್ರೀಂಕೋರ್ಟ್ ೧೯೯೪ರಲ್ಲಿ ನೀಡಿರುವ ತೀರ್ಪಿನಂತೆ ತನಿಖೆ ಮುಂದುವರಿಸಬಹುದಾಗಿದೆ ಎಂದು ಸಿಬಿಐ ಪರ ವಕೀಲರು ತಿಳಿಸಿದರು.
ಸರ್ಕಾರದ ಆದೇಶವನ್ನು ಯಾರಾದರೂ ಪ್ರಶ್ನಿಸಬೇಕು ಎಂದ ಚೀಫ್ ಜಸ್ಟೀಸ್ ಬಿ.ವರಾಳೆ. ಸರ್ಕಾರದ ಆದೇಶ ಪ್ರಶ್ನಿಸದೇ ಸಿಬಿಐ ವಾದ ಮಂಡಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಸರ್ಕಾರ ಅನುಮತಿ ಹಿಂಪಡೆದ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ಮೇಲ್ಮನವಿಯನ್ನು ಹಿಂಪಡೆದಿದ್ದು, ಈ ಮೂಲಕ ಡಿಕೆಶಿಗೆ ಮೊದಲ ಹಂತದ ರಿಲೀಫ್ ಸಿಕ್ಕಂತಾಗಿದೆ. ಬಳಿಕ ಅರ್ಜಿ ವಿಚಾರಣೆ ಕೆಲ ಕಾಲ ಮುಂದೂಡಿದ್ದು, ನಂತರ ಪುನರಾರಂಭಗೊಂಡಿತ್ತು.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಸರ್ಕಾರದಲ್ಲಿನ ಮೆಮೋದಲ್ಲಿನ ಅಂಶಗಳನ್ನು ಬರೆಯಿಸುತ್ತಿರುವ ಹೈಕೋರ್ಟ್ ಸಿಜೆ. ಸಿಬಿಐ ತನಿಖೆಗೆ ಹಿಂದೆ ನೀಡಿದ್ದ ಒಪ್ಪಿಗೆ ಹಿಂಪಡೆದಿದೆ. ಯತ್ನಾಳ್ ಈ ಕೇಸ್ ನಲ್ಲಿ ಪ್ರತಿವಾದಿಯಾಗಲು ಬಯಸಿಲ್ಲ. ಮಾಧ್ಯಮ ವರದಿ ಆಧರಿಸಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ಸರ್ಕಾರದ ಕ್ರಮವನ್ನು ಯಾರೂ ಪ್ರಶ್ನಿಸಿಲ್ಲ. ಸಿಬಿಐ, ಯತ್ನಾಳ್ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕಾಜಿ ಲೆಂಡಪ್ ದೋರ್ಜಿ ಕೇಸ್ ನಲ್ಲಿ ಸರ್ಕಾರದ ಕ್ರಮ ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ವಾಪಸ್ ಗೆ ಅನುಮತಿ ನೀಡುವುದಾಗಿ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ತೀರ್ಪು ನೀಡುತ್ತಿಲ್ಲ. ಆದರೆ ಅರ್ಜಿದಾರರಿಗೆ ಮೇಲ್ಮನವಿ ಹಿಂಪಡೆಯಲು ಅವಕಾಶವಿದೆ ಎಂದು ಗುರುದೇವ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರದ ಪ್ರಕರಣ ಉಲ್ಲೇಖಿಸಿ ಹೈಕೋರ್ಟ್ ಆದೇಶ ನೀಡಿದೆ.
ಈ ಮಧ್ಯೆ ಯತ್ನಾಳ್ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಈವರೆಗೂ ಸರ್ಕಾರದ ಕ್ರಮ ಯಾರು ಪ್ರಶ್ನಿಸಿ ಅರ್ಜಿ ಸಲ್ಲಿಸಿಲ್ಲ. ಕಾಜಿ ಲೆಂಡಪ್ ದೋರ್ಜ್ ಪ್ರಕರಣದ್ಲಲಿ ಸರ್ಕಾರದ ಕ್ರಮ ಪ್ರಶ್ನಿಸಲಾಗಿತ್ತು ಎಂಬುದಾಗಿ ಹೇಳುವ ಮೂಲಕ, ಡಿಕೆ ಶಿವಕುಮಾರ್ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿ ವಾಪಾಸ್ ಗೆ ಅನುಮತಿಸಿತು. ಈ ಮೂಲಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಯಾವುದೇ ತಪ್ಪು ಮಾಡಿಲ್ಲ
ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಬಗ್ಗೆ ನನಗೆ ಇನ್ನು ಸಂಪೂರ್ಣ ಮಾಹಿತಿ ಇಲ್ಲ. ವಕೀಲರ ಜತೆ ಮಾತನಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ತೀರ್ಮಾನವನ್ನು ಸಚಿವ ಸಂಪುಟ ಕೈಗೊಂಡ ನಂತರ ಯಾರು ಯಾರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ನಮ್ರತೆಯಿಂದ ಗಮನಿಸಿದ್ದೇನೆ. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲಾ ಪಕ್ಷ ಸಲುವಾಗಿ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿ ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ತೊಂದರೆ ಕೊಡುತ್ತೇವೆ ಎಂದರೆ ಅದನ್ನು ನೋಡಲು ಭಗವಂತ ಇದ್ದಾನೆ. ರಾಜ್ಯದ ಜನರು ನನ್ನ ಪರವಾಗಿದ್ದಾರೆ. ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು ಎಂದರು.