ಕೋಲಾರ,ಜು.೨೭-ಡೈನಾಮಿಕ್ ಲೀಡರ್ ಡಿಕೆ.ಶಿವಕುಮಾರ್‌ರಿಗೆ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವ ಮತ್ತು ಪಕ್ಷವನ್ನು ಕಟ್ಟುವ ಶಕ್ತಿಯಿದೆ ಎಂದು ಶಾಸಕ ಕೆವೈ.ನಂಜೇಗೌಡ ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಅವರು ಸಿಂಗಪುರದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ಉರುಳಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಮಾಜಿ ಸಿಎಂ ಎಚ್‌ಡಿ.ಕುಮಾರಸ್ವಾಮಿ ಅವರು ಸಿಂಗಪುರದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ಒಡೆಯುವ ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಕ್ಕೆ ಕೆವೈ.ನಂಜೇಗೌಡ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವ ಶಕ್ತಿಯಿದೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಒಟ್ಟಿಗೆ ಪಕ್ಷವನ್ನು ಕಟ್ಟುವ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ಚುನಾವಣೆಯಲ್ಲಿ ಕೊಟ್ಟ ಗ್ಯಾರೆಂಟಿ ಭರವಸೆಗಳನ್ನು ಈಡೇರಿಸಲು ಒಟ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ರಾಜ್ಯದ ಜನತೆಯ ನಂಬಿಕೆ ಉಳಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆಯನ್ನು ಜಾರಿಗೊಳಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಈಗಿನ ಬಜೆಟ್‌ನಲ್ಲಿ ಮಾಲೂರು ಕ್ಷೇತ್ರಕ್ಕೆ ಆರು ಪಥದ ರಸ್ತೆಯ ಅಭಿವೃದ್ದಿಗೆ ಅವಕಾಶ ಮಾಡಿಕೊಡಲಾಗಿದೆ. ಕೆಜಿಎಫ್ ಕ್ಷೇತ್ರಕ್ಕೆ ಕೈಗಾರಿಕಾ ವಲಯವನ್ನು ಮಂಜೂರು ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ಉತ್ತಮವಾದ ಯೋಜನೆಗಳನ್ನು ಕೋಲಾರ ಜಿಲ್ಲೆಗೆ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.