ಡಿಎಚ್ ಒ ಕಚೇರಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

ಬೀದರ.ಮಾ.25: ‘ಕ್ಷಯರೋಗದ ನಿರ್ಮೂಲನೆಗೆ ಸರ್ಕಾರ ಪಣ ತೊಟ್ಟಿದೆ. ರೋಗದ ಲಕ್ಷಣಗಳು ಇದ್ದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್ ಹೇಳಿದರು.

ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯರೋಗವು ಯಾರಿಗೆ ಬೇಕಾದರೂ ಬರಬಹುದು.
ಹೆಚ್ಚಿನ ಅಪಾಯದ ಗುಂಪುಗಳಿಗೆ ಒಂದು ದಿವಸ ಕೆಮ್ಮು ಇದ್ದರೆ ಅಂಥವರು ಕಫ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ಬ್ರೀಮ್ಸ್ ನಿರ್ದೇಶಕ ಡಾ.ಶಿವಕುಮಾರ ಸಿ.ಆರ್, ವೈದ್ಯಕೀಯ ಅಧೀಕ್ಷಕ ಶಿವಕುಮಾರ ಶೆಟಕಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ರತಿಕಾಂತ ಸ್ವಾಮಿ, ಐ.ಎಂ.ಎ ಅಧ್ಯಕ್ಷ ಡಾ.ವಿ.ವಿ ನಾಗರಾಜ, ಐ.ಪಿ.ಎ ಅಧ್ಯಕ್ಷ ಡಾ.ಶಾಂತಲಾ ಕೌಜಲಗಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ದೀಪಾ ಖಂಡ್ರೆ, ಆರ್‌ಸಿಎಚ್ ಅಧಿಕಾರಿ ಮಹೇಶ ಬಿರಾದಾರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಕೃಷ್ಣಾ ರೆಡ್ಡಿ, ಕುಟುಂಬ ಕಲ್ಯಾಣ ಅಧಿಕಾರಿ ಶಿವಶಂಕರ ಬಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಜುಕುಮಾರ ಪಾಟೀಲ, ಬ್ರೀಮ್ಸ್ (ಕ್ಷಯರೋಗ ವಿಭಾಗ) ನೋಡಲ್ ಅಧಿಕಾರಿ ಡಾ.ಮಹೇಶ ತೊಂಡಾರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೆ ಇದ್ದರು.