
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.23: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೊಲೀಸ್ ಪೇದೆ ಪಿ. ಜಾಫರ್ ಸಾಹೀಬ್ ನನ್ನು ಪೊಲೀಸ್ ಕ್ವಾಟರ್ಸನಲ್ಲಿಯೇ ನಿನ್ನೆ ತಡ ರಾತ್ರಿ ಹತ್ಯೆ ಮಾಡಲಾಗಿದೆ.
ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವಶಂಕೆ ವ್ಯಕ್ತವಾಗಿದೆ.
ಕಿವಿಯಲ್ಲಿನ ರಕ್ತಸ್ರಾವದಿಂದ ಗಂಭೀರವಾಗಿ ಗಾಯ ಗೊಂಡು ಜಾಫರ್ ನನ್ನು ವಿಮ್ಸ್ ಗೆ ದಾಖಲು ಮಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಹೊಸಪೇಟೆ ತಾಲೂಕಿನ ಚಿನ್ನಾಪುರದ ಈತ ಡಿಎಆರ್ ಪೊಲೀಸ್ ಪೇದೆಯಾಗಿ 2008 ರಲ್ಲಿ ನೇಮಕವಾಗಿದ್ದ. ಅದೇ ಗ್ರಾಮದ ನವೀನ್ ತಾಜಳನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಕಳೆದ ಐದು ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ಟು, ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹನುಮಕ್ಕಳನ್ನು ಎರಡನೇ ವಿವಾಹವಾಗಿ ಒಂದು ಮಗುವಿನೊಂದಿಗೆ ವಾಸ ಮಾಡುತ್ತಿದ್ದರು.
ನಿನ್ನೆ ರಾತ್ರಿ ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಹತ್ಯೆ ನಡೆದಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಎರಡನೇ ಪತ್ನಿಯೇ ಕೊಲೆ ಮಾಡಿರಬೇಕೆಂದು ಶಂಕಿಸಲಾಗಿದ್ದು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ವಿವಾಹ ವಿಚ್ಛೇದನೆಗೆ ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಳು ಇದರಿಂದ ಮೃತನ ಇತ್ತೀಚೆಗೆ ಆಕೆಯ ಜೊತೆ ಬೆರೆಯತೊಡಗಿದ್ದ. ಇದನ್ನು ಸಹಿಸದೇ ಎರಡನೇ ಪತ್ನಿ ಕೊಲೆ ಮಾಡಿದ್ದಾಳೆಂದು ಪೇದೆಯ ಕುಟುಂಬದವರು ದೂರು ನೀಡಿದ್ದಾರಂತೆ. ಈ ಬಗ್ಗೆ ಗಾಂಧಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.