ಡಿಎಂಕೆ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ವೆಲ್ಲೂರು,ಏ.೧೦- ಕಾಂಗ್ರೆಸ್ ಮತ್ತು ತಮಿಳುನಾಡಿನ ಆಢಳಿತಾರೂಢ ಡಿಎಂಕೆ ಪಕ್ಷದ ಬೂಟಾಟಿಕೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ ಎಂದು ಈ ಎರಡೂ ಮಿತ್ರ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ನೀಡಿ ಈ ಭಾಗದ ಜನರಿಗೆ ವಂಚನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲು ಯಾವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ,ಯಾರ ಲಾಭಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರೆ ಕಾಂಗ್ರೆಸ್ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಚ್ಚತೀವು ದ್ವೀಪದ ಬಳಿ ಹೋದ ತಮಿಳುನಾಡಿನ ಸಾವಿರಾರು ಮೀನುಗಾರರನ್ನು ಬಂಧಿಸಲಾಗಿದೆ. ಎನ್‌ಡಿಎ ಸರ್ಕಾರ ನಿರಂತರವಾಗಿ ಅಂತಹ ಮೀನುಗಾರರನ್ನು ಬಿಡುಗಡೆ ಮಾಡಿ ಕರೆತರುತ್ತಿದೆ ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲ ಐವರು ಮೀನುಗಾರರಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ ಅವರನ್ನು ಜೀವಂತವಾಗಿ ಕರೆತಂದಿದ್ದೇನೆ, ಡಿಎಂಕೆ ಮತ್ತು ಕಾಂಗ್ರೆಸ್ ಕೇವಲ ಮೀನುಗಾರರ ಅಪರಾಧಿಗಳಲ್ಲ, ಆದರೆ ದೇಶದ ಅಪರಾಧಿಗಳು ಎಂದು ವಾಗ್ದಾಳಿ ನಡೆಸಿದ್ಧಾರೆ.
“ಭಾರತ ಇಂದು ವಿಶ್ವದಲ್ಲಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಮತ್ತು ತಮಿಳುನಾಡು ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ,ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮುಂದಿದೆ.ತಮಿಳುನಾಡಿನ ಕಠಿಣ ಪರಿಶ್ರಮ ಭಾರತದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳಲಾಗುವುದು ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್ ಈ ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಕುಳಿತಿರುವವರಿಗೆ ತಮಿಳುನಾಡು ಮತ್ತು ವೆಲ್ಲೂರು ಹೊಸ ಇತಿಹಾಸ ನಿರ್ಮಿಸಲಿದೆ ಎಂದು ತಿಳಿದಿಲ್ಲ. ಮತ್ತು ಎನ್ ಡಿಎಗೆ ತಮಿಳುನಾಡಿನಲ್ಲಿ ಅಪಾರ ಜನಬೆಂಬಲ ಸಿಗುತ್ತಿದೆ.ಇಡೀ ತಮಿಳುನಾಡು ಮತ್ತೊಮ್ಮೆ ಮೋದಿ ಸರ್ಕಾರ ಎನ್ನುತ್ತಿದೆ. ನಾವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯಲ್ಲಿ ತಮಿಳು ಭಾಷಣ
ವಿಶ್ವಸಂಸ್ಥೆಯಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ, ಇದರಿಂದಾಗಿ ನಮ್ಮ ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ ಎಂದು ಇಡೀ ಜಗತ್ತಿಗೆ ತಿಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ.
“ಕಾಶಿಯ ಸಂಸದನಾಗಿ, ಕಾಶಿಯಲ್ಲಿ ತಮಿಳು ಸಂಗಮ ಆಯೋಜನೆಗೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇನೆ.ಎರಡನೆಯದಾಗಿ, ನಾನು ಗುಜರಾತ್‌ನಲ್ಲಿ ಹುಟ್ಟಿದ್ದೇನೆ ಮತ್ತು ಗುಜರಾತ್‌ನ ಹಲವಾರು ಕುಟುಂಬಗಳು ತಮಿಳುನಾಡಿನಲ್ಲಿ ವಾಸಿಸುತ್ತಿವೆ. ಒಬ್ಬ ಗುಜರಾತಿಯಾಗಿ ನಿಮ್ಮನ್ನು ಸೌರಾಷ್ಟ್ರ ತಮಿಳು ಸಂಗಮಕ್ಕೆ ಆಹ್ವಾನಿಸುತ್ತೇನೆ,” ಎಂದು ಹೇಳಿದ್ದಾರೆ.

ಡ್ರಗ್ ಮಾಫಿಯಾ: ಪಿಎಂ ವಾಗ್ದಾಳಿ
ತಮಿಳುನಾಡಿನಲ್ಲಿ ಡ್ರಗ್ ಮಾಫಿಯಾ ಹೆಚ್ಚಾಗಿದೆ. ಈ ಮಾಫಿಯಾಗಳು ಯಾರ ರಕ್ಷಣೆ ಕೊಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಎನ್‌ಸಿಬಿಯಿಂದ ಬಂಧಿಸಲ್ಪಟ್ಟ ಡ್ರಗ್ ಮಾಫಿಯಾ ಯಾವ ಕುಟುಂಬಕ್ಕೆ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.
ಡಿಎಂಕೆ ಪಕ್ಷ ಜನರ ಹೆಸರಿನಲ್ಲಿ ಹೋರಾಡುವಂತೆ ಮಾಡುತ್ತದೆ. ಪ್ರದೇಶ, ಧರ್ಮ ಮತ್ತು ಜಾತಿಯ ಒಡೆದು ಆಳುವ ರಾಜಕೀಯವನ್ನು ಜನರು ಅರ್ಥಮಾಡಿಕೊಂಡ ದಿನವೇ ಡಿಎಂಕೆಗೆ ಒಂದೇ ಒಂದು ಮತವೂ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕಾರಣಕ್ಕಾಗಿಯೇ ಡಿಎಂಕೆ ಪಕ್ಷ ಮತಕ್ಕಾಗಿ ಜನರ ನಡುವೆ ಜಗಳ ತರುತ್ತಿದೆ. ಡಿಎಂಕೆಯ ಅಪಾಯಕಾರಿ ರಾಜಕಾರಣವನ್ನು ಬಯಲಿಗೆಳೆಯಿರಿ .ತಮಿಳುನಾಡನ್ನು ಹಳೆಯ ಚಿಂತನೆ, ಹಳೆಯ ರಾಜಕೀಯದಲ್ಲಿ ಸಿಲುಕಿಸಲು ಡಿಎಂಕೆ ಬಯಸಿದೆ, ಇಡೀ ಡಿಎಂಕೆ ಒಂದು ಕುಟುಂಬದ ಕಂಪನಿಯಾಗಿದೆ ಎಂದು ಜನರಿಗೆ ಕರೆ ನೀಡಿದ್ದಾರೆ.

ಡಿಎಂಕೆ ವಿರುದ್ದ ವಾಗ್ದಾಳಿ:
ಆಡಳಿತಾರೂಢ ಡಿಎಂಕೆ ಪಕ್ಷದ ಕುಟುಂಬ ರಾಜಕಾರಣದಿಂದಾಗಿ ತಮಿಳುನಾಡಿನ ಯುವಕರು ಮುನ್ನೆಲೆಗೆ ಬರಲು ಅವಕಾಶ ಸಿಗುತ್ತಿಲ್ಲ ಬದಲಾಗಿ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ತಮಿಳು ಸಂಸ್ಕೃತಿಯ ವಿರೋಧಿಯಾಗಿದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ
ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪರವಾಗಿ ಚುನಾವಣೆಗೆ ಸ್ಪರ್ಧಿಸಲ ಮೂರು ಪ್ರಮುಖ ಮಾನದಂಡಗಳು ಇದ್ದವರಿಗೆ ಮಾತ್ರ ಅವಕಾಶ ನೀಡುತ್ತಾರೆ. ಇಲ್ಲದಿದ್ದರೆ ಪ್ರಾಮಾಣಿಕ ಯುವ ಸಮುದಾಯಕ್ಕೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದಾರೆ.