ಡಾ.ಸೇಡಂ ಸಂಘಕ್ಕೆ ಕೆಕೆಆರ್‍ಡಿಬಿ ಅನುದಾನ ಹಂಚಿಕೆಗೆ ಡಾ. ಅಜಯಸಿಂಗ್ ವಿರೋಧ

ಕಲಬುರಗಿ,ಏ.03:ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ ಮೇಲೆ ರಾಜ್ಯ ಬಿಜೆಪಿ ಸರ್ಕಾರವು ಕೆಂಗೆಣ್ಣು ಬೀರಿದೆ. ಮಂಡಳಿಯ 100 ಕೋಟಿ ರೂ.ಗಳನ್ನು ರಾಜ್ಯಸಭಾ ಮಾಜಿ ಸದಸ್ಯ ಡಾ. ಬಸವರಾಜ್ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘಕ್ಕೆ ಅನುದಾನ ಕೊಟ್ಟಿರುವುದು ಸರಿಯಲ್ಲ ಎಂದು ರಾಜ್ಯ ವಿಧಾನಸಭೆಯಲ್ಲನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರು ಆಕ್ರೋಶ ಹೊರಹಾಕಿದರು.
ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡಳಿಯಿಂದ ಡಾ. ಬಸವರಾಜ್ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘಕ್ಕೆ 100 ಕೋಟಿ ರೂ.ಗಳನ್ನು ಕೊಡಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಅನುದಾನದ ಹಕ್ಕಿಗೆ ರಾಜ್ಯ ಬಿಜೆಪಿ ಸರ್ಕಾರವು ಕತ್ತರಿ ಪ್ರಯೋಗ ಮಾಡುವ ಮೂಲಕ ಮೋಸ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆ ನೋಡಿದರೆ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಆರಂಭದಲ್ಲಿ 1000 ಕೋಟಿ ರೂ.ಗಳನ್ನು, ಆನಂತರದಲ್ಲಿ 1,500 ಕೋಟಿ ರೂ.ಗಳ ಅನುದಾನ ಕೊಡಲಾಯಿತು. ಆ ಅನುದಾನದ ಮಾದರಿಯ ಮೇಲೆ ಹಾಲಿ ಬಿಜೆಪಿ ಸರ್ಕಾರವು ಮಂಡಳಿಗೆ ಕನಿಷ್ಠ 2000 ಕೋಟಿ ರೂ.ಗಳನ್ನಾದರೂ ಸಹ ನೀಡಬೇಕಾಗಿತ್ತು. ಆದಾಗ್ಯೂ, ಮಹಾಮಾರಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಮಂಡಳಿಯ ಅನುದಾನವನ್ನು ಕಡಿತಗೊಳಿಸಲಾಯಿತು. ಅದಕ್ಕೂ ನಾವು ಒಪ್ಪುತ್ತೇವೆ. ಆದಾಗ್ಯೂ, ಕಡಿತ ಮಾಡಿದ ಅನುದಾನದಲ್ಲಿಯೇ 100 ಕೋಟಿ ರೂ.ಗಳನ್ನು ಸಂಘಕ್ಕೆ ಕೊಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಮೋಸ ಮಾಡಲಾಗಿದೆ ಎಂದು ಅವರು ದೂರಿದರು.
ಯೋಜನಾ ಇಲಾಖೆಯ ಪತ್ರದ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಲಾಗಿರುವ ಮೂರನೇ ಕಂತಿನ 249 ಕೋಟಿ ರೂ.ಗಳ ಅನುದಾನದಲ್ಲಿ 100 ಕೋಟಿ ರೂ.ಗಳನ್ನು ಬಸವರಾಜ್ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿನ ಸಂಘಕ್ಕೆ ಒದಗಿಸಲಾಗಿದೆ. ಸಂಘಕ್ಕೆ ಅನುದಾನ ಕೊಡುವುದಕ್ಕೆ ನಮ್ಮ ಯಾವುದೇ ತಕರಾರು ಹಾಗೂ ವಿರೋಧ ಇಲ್ಲ. ರಾಜ್ಯ ಬಿಜೆಪಿ ಸರ್ಕಾರವು ಪ್ರತ್ಯೇಕವಾಗಿ ಆ ಅನುದಾನ ಒದಗಿಸಬೇಕಾಗಿತ್ತು ಎಂದು ಅವರು ಹೇಳಿದರು.
ಮೊದಲೇ ಕೊರೋನಾದಿಂದ ಆರ್ಥಿಕ ಸಂಕಷ್ಟ ಎಂದು ಹೇಳಿ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವಾರ್ಷಿಕ 1500 ಕೋಟಿ ರೂ.ಗಳ ಅನುದಾನವನ್ನು 1.131 ಕೋಟಿ ರೂ.ಗಳಿಗೆ ಕಡಿತಗೊಳಿಸಿದ್ದು, ಆ ಮೊತ್ತದಲ್ಲಿಯೇ ಸಂಘಕ್ಕೆ ಅನುದಾನ ಕೊಟ್ಟಿರುವುದರಿಂದ ಸರ್ಕಾರವೇ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಬಹುದೊಡ್ಡ ಪೆಟ್ಟು ನೀಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರಂಭದಲ್ಲಿಯೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘಕ್ಕೆ ಪ್ರತ್ಯೇಕವಾಗಿ 500 ಕೋಟಿ ರೂ.ಗಳನ್ನು ಘೋಷಿಸಿದ್ದರು. ಇಂತಹ ಮರು ಹಂಚಿಕೆಯಿಂದ ಕಲ್ಯಾಣ ಕರ್ನಾಟಕವು ಬರುವ ಸಾಮಾನ್ಯ ಅನುದಾನದಿಂದಲೂ ಸಹ ವಂಚಿತಗೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಿರಿಯರಾದ ಡಾ. ಬಸವರಾಜ್ ಪಾಟೀಲ್ ಅವರಿಗೆ ರಾಜ್ಯ ಸರ್ಕಾರವು ಒಳ್ಳೆಯ ಜವಾಬ್ದಾರಿಯನ್ನು ನೀಡಿದೆ ಎಂದು ಹೇಳಿದ ಅವರು, ಆದಾಗ್ಯೂ, ಅವರ ಅಧ್ಯಕ್ಷತೆಯಲ್ಲಿನ ಸಂಘಕ್ಕೆ ಕೆಕೆಆರ್‍ಡಿಬಿ ಅನುದಾನ ಕೊಡುವ ಮೂಲಕ ಈ ಪ್ರದೇಶಕ್ಕೆ ಅವಮಾನ ಮಾಡಲಾಗಿದೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಸಂಘಕ್ಕೆ ಘೋಷಿಸಿದಂತೆ ಪ್ರತ್ಯೇಕವಾಗಿ 500 ಕೋಟಿ ರೂ.ಗಳನ್ನು ಒದಗಿಸಬೇಕು. ಮಂಡಳಿಯ 100 ಕೋಟಿ ರೂ.ಗಳ ಅನುದಾನವನ್ನು ಮರಳಿ ಮಂಡಳಿಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.