ಡಾ. ಸುಧಾಕರ್ ಹೇಳಿಕೆ ಸಾ.ರಾ. ಬೇಸರ


ಬೆಂಗಳೂರು,ಮಾ.೨೫- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಸುಧಾಕರ್ ನೀಡಿರುವ ಹೇಳಿಕೆ ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಈ ಹೇಳಿಕೆ ಬಗ್ಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಟ್ವಿಟರ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿರುವವರು ನಾವು, ಬಡಿದಾಡುತ್ತೇವೆ. ಬೈದಾಡಿಕೊಳ್ಳುತ್ತೇವೆ ಆದರೆ, ಈ ವಿಚಾರದಲ್ಲಿ ಪತ್ನಿ ಮಕ್ಕಳನ್ನು ಎಳೆದು ತರುವುದು ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅವಮಾನ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡ ತರುವುದು ವಂಚನೆಯೇ ಸರಿ. ನಮ್ಮನ್ನು ನಂಬಿದ ಕುಟುಂಬ ಸದಸ್ಯರಿಗೆ ಯಾವೊತ್ತು ಅಪಮಾನವಾಗಬಾರದು ಎಂದು ಹೇಳಿದ್ದಾರೆ.
ಸಮಾಜವನ್ನೇ ಶಂಕೆಗೆ ದೂಡಿದವರು, ತಾವು ಸೃಷ್ಟಿ ಮಾಡಿದ ಅನಾಹುತದ ಬಗ್ಗೆ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಧಾಕರ್ ನೀಡಿರುವ ಹೇಳಿಕೆ ತಮ್ಮದೇ ಕುಟುಂಬದಲ್ಲಿ ಸೃಷ್ಟಿ ಮಾಡಿರಬಹುದಾದ ಅಪನಂಬಿಕೆಯನ್ನು ಒಮ್ಮೆ ಗಮನಿಸಬೇಕು ಎಂದು ಸಾ.ರಾ ಮಹೇಶ್ ಪ್ರಶ್ನಿಸಿದ್ದಾರೆ.