ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರ ಜೀವನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.05: ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರ ಜೀವನ ಆದರ್ಶಗಳನ್ನು ಅಳವಡಿಸಿಕೊಳ್ಳಲು ವೀ.ವಿ.ಸಂಘದ ಸಹ ಕಾರ್ಯದರ್ಶಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು ಕರೆ ನೀಡಿದರು.
ನಗರದ ವೀರಶೈವ ಮಹಾವಿದ್ಯಾಲಯದಲ್ಲಿಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಹಾಗೂ ಸಂಸ್ಥಾಪಕರ ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸುಮಾರು ಒಂದು ಶತಮಾನದ ಹಿಂದೆಯೇ ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವವನ್ನು ಅರಿತ ಶಿವಯೋಗ ಮಂದಿರದ ಶ್ರೀ.ಮ.ನಿ.ಪ್ರ.ಲಿಂ. ಕುಮಾರ ಶಿವಯೋಗಿಗಳು ಹಾನಗಲ್ ಮತ್ತು  ಶ್ರೀ.ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ಉಜ್ಜಯಿನಿ ಪೀಠ ಇವರುಗಳು ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಕಾರಣದಿಂದಾಗಿಯೆ ಇಂದು ವೀರಶೈವ ವಿದ್ಯಾವರ್ಧಕ ಸಂಘವು ಹೆಮ್ಮೆರವಾಗಿ ಬೆಳೆದು ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿದೆ. ಇಂತಹ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಹಾಗೆಯೇ ಇಂದು ಡಾ.ಸರ್ವೆಪಲ್ಲಿ ರಾಧಕೃಷ್ಣನ್‍ರವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಅವರು ಕಡುಬಡತನದಲ್ಲಿ ಹುಟ್ಟಿ ಬೆಳೆದರೂ ಸಹ ವಿಶೇಷ ಪರಿಶ್ರಮ ಮತ್ತು ಆಸಕ್ತಿಯಿಂದಾಗಿ ತತ್ವ ಶಾಸ್ರ್ತದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮಹಾನ್ ತತ್ವಜ್ಞಾನಿಗಳಾಗಿ, ಶಿಕ್ಷಣತಜ್ಞರಾಗಿ, ರಾಜನೀತಿಜ್ಞರಾಗಿ, ಸ್ವತಂತ್ರ್ಯ ಭಾರತದ ರಾಷ್ಟ್ರಪತಿಗಳ ಹುದ್ದೆಯನ್ನು ಅಲಂಕರಿಸಿದ್ದು ಸಾಮಾನ್ಯ ಸಂಗತಿಯೇನಲ್ಲ. ಆದಾಗ್ಯೂ ಅವರ ಶಿಕ್ಷಣ ಪ್ರೇಮ ಮತ್ತು ಶಿಕ್ಷಕ ವೃತ್ತಿಯ ಮೇಲಿನ ಪ್ರೀತಿ ಅಪಾರವಾಗಿತ್ತು. ಆದ್ದರಿಂದಲೇ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಅವರು ಸೂಚಿಸಿದರು. ದೇಶ ವಿದೇಶಗಳ್ಲ್ಲಿಯೂ ಪ್ರಖ್ಯಾತಿಯನ್ನು ಪಡೆದು ಅನೇಕ ಸ್ಥಾನಮಾನಗಳಿಗೆ ಭಾಜನರಾದ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಕೃಷ್ಣಣನ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಕರೇಗೌಡರು ಸಂಸ್ಥಾಪಕರ ದಿನಾಚರಣೆಯ ಕುರಿತಾಗಿ ಮಾತನಾಡಿದರು ಮತ್ತು  ಗಂಗಾವತಿ ವೀರೇಶ್, ಡಿ.ವಿಶ್ವನಾಥ, ಪ್ರಾಚಾರ್ಯರಾದ ಡಾ.ಕೆ.ಸಿ.ಸಜ್ಜನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೌತಮ್ ಸುಜಯ್‍ರವರು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಜಿ.ಮನೋಹರರವರು ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು.