ಡಾ|| ಸಂಗನಬಸವ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.23:  ನಗರದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಕಾಯಕಯೋಗಿ, ತ್ರಿವಿಧದಾಸೋಹಿ ಲಿಂ. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಪ್ರಥಮ ಪುಣ್ಯಸ್ಮರಣೋತ್ಸವ, ಅಧ್ಯಾತ್ಮ ಪ್ರವಚನ ಮಂಗಲಮಹೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣಾ ಸಮಾರಂಭ ಜರುಗಿತು.
ಕಾರ್ಯಕ್ರಮದ ಸನ್ನಿಧಾನ ವಹಿಸಿಕೊಂಡಿದ್ದ ಶ್ರೀಮಠದ ಪೀಠಾಧಿಪತಿಗಳಾದ ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳವರು ತಮ್ಮ ಗುರುಗಳಾದ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ತಮ್ಮ ಐವತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಅವರು ಸಮಾಜೋ-ಧಾರ್ಮಿಕ, ಸಮಾಜೋ-ಶೈಕ್ಷಣಿಕ, ಸಮಾಜೋ-ಸಾಂಸ್ಕೃತಿಕ, ಸಮಾಜೋ-ಸಂಕೀರ್ಣ ರಂಗಗಳಲ್ಲಿ ಜಾತ್ಯಾತೀತ ನೆಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡ ಉರವಕೊಂಡ ಉರಗಾದ್ರಿಮಠದ ಶ್ರೀ ಜಗದ್ಗುರು ಡಾ. ಕರಿಬಸವ ಮಹಾಸ್ವಾಮಿಗಳು ಪೂಜ್ಯರು ಸಮಾಜ ಪ್ರೇಮಿಗಳು, ಭಕ್ತಾನುರಾಗಿಗಳು ಆಗಿ ನಮ್ಮ ಭಾಗದ ನಿಜವಾದ ನಡೆದಾಡುವ ದೇವರಾಗಿದ್ದರೆಂದು ಪೂಜ್ಯರೊಂದಿಗಿನ ತಮ್ಮ ಒಡನಾಟವನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಗುರುಪರಂಪರೆ ವಿಷಯದ ಮೇಲೆ ಪ್ರೊ. ಎಸ್.ಸಿ. ಪಾಟೀಲ ಅವರು ಉಪನ್ಯಾಸ ನೀಡಿದರು. ಹಾಗೂ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ ಸಾಮಾಜಿಕ ಕಾರ್ಯಗಳು ಎಂಬ ವಿಷಯದ ಮೇಲೆ ಎಫ್.ಎನ್. ಹುಡೇದ ಅವರು ಉಪನ್ಯಾಸ ನೀಡಿ, ಶ್ರೀಗಳು ಮಾಡಿದ ಸಾಮಾಜಿಕ ಕಾರ್ಯಗಳನ್ನು ಪ್ರಸ್ತುತಪಡಿಸಿದರು.
ಇದೇ ಸಂದರ್ಬದಲ್ಲಿ ನೇತಿ ರಘುರಾಮ ಅವರಿಂದ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಅನಂತಪುರ ಜಿಲ್ಲೆಯ ಐತಿಹಾಸಿಕ ಕಥೆಗಳು ಎಂಬ ಗ್ರಂಥವನ್ನು ಬಳ್ಳಾರಿ ನಗರದ ಶಾಸಕರಾದ ಜಿ. ಸೋಮಶೇಖರರೆಡ್ಡಿ ಅವರು ಬಿಡುಗಡೆಗೊಳಿಸಿ, ಪೂಜ್ಯರೊಂದಿಗಿನ ತಮ್ಮ ಒಡನಾಟದ ಅನುಭವವನ್ನು ಮೆಲಕುಹಾಕುತ್ತ, ಶ್ರೀಮಠದ ಯಾವುದೇ ಕೆಲಸವಿದ್ದರೆ ತಾವು ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಬಾಗದ ಮುಖ್ಯಸ್ಥರಾದ ಡಾ. ಕೆ. ರವೀಂದ್ರನಾಥರವರು ಈ ಗ್ರಂಥ ಪರಿಚಯನ್ನು ಮಾಡಿಕೊಟ್ಟರು. ‘ಬುಕ್ಕರಾಯ ಸಮುದ್ರ ಅನಂತಸಾಗರ ಗ್ರಾಮಗಳ ಕೆರೆಯ ಕೈಫಿಯತ್ತು’ ಗ್ರಂಥವನ್ನು ಲೋಕಾರ್ಪಣೆಗೊಳಿಸಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾದ ಎನ್. ತಿಪ್ಪಣ್ಣನವರು ಡಾ. ಸಮಗನಬಸವ ಮಹಾಸ್ವಾಮಿಗಳು ಈ ಮಠಕ್ಕೆ ಅಧಿಕಾರ ಹೊಂದುವಾಗ ತಾವಿದ್ದುದನ್ನು ಹಾಗೂ ಶ್ರೀಮಠ ಅವರ ಕಾಲಾವಧಿಯಲ್ಲಿ ಅಭಿವೃದ್ದಿಯಾದ ಬಗೆಯನ್ನು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡ ಮತ್ತೊಂದು ಕೃತಿ ‘ಬಳ್ಳಾರಿ ಅನಂತಪುರದ ಅರಸ ಹಂಡೆ ಹನುಮಪ್ಪ ನಾಯಕ’ ಗ್ರಂಥವನ್ನು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಯ್ಯಸ್ವಾಮಿಯವರು ಲೋಕಾರ್ಪಣೆಗೊಳಿಸಿದರು. ಚಿತ್ರದುರ್ಗದ ಹಿರಿಯ ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪ ಗ್ರಂಥ ಪರಿಚಯ ಮಾಡಿಕೊಟ್ಟರು.
ದಿನಾಂಕ 16ರಿಂದ ಜರುಗಿದ ಅಧ್ಯಾತ್ಮ ಪ್ರವಚನದ ಮಂಗಲನುಡಿಯನ್ನು ಅನುಭಾವಿಗಳಾದ ಪೂಜ್ಯಶ್ರೀ ವೀರಬಸವ ದೇವರು ನಡೆಸಿಕೊಟ್ಟರು. ದರೂರಿನ ಶ್ರೀ ಕೊಟ್ಟೂರು ಸ್ವಾಮಿಗಳು, ಗುಳೇದಗುಡ್ಡದ ಶ್ರೀ ಷ.ಬ್ರ. ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆ ವಿರಕ್ತಮಠದ ಶ್ರೀ ಮರಿಕೊಟ್ಟೂರು ದೇವರು, ಬೂದಗುಂಪ ವಿರಕ್ತಮಠದ ಸಿದ್ಧೇಶ್ವರ ದೇವರು ಕಾರ್ಯಕ್ರಮದ ಸಮ್ಮುಖವನ್ನು ವಹಿಸಿಕೊಂಡಿದ್ದರು.
ಗೌರವಾನ್ವಿತ ಅತಿಥಿಗಳಾಗಿ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ, ವೀ.ವಿ. ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಚಾನಾಳ ಶೇಖರ, ಎಸ್. ಗುರುಲಿಂಗನಗೌಡ್ರು, ಜಿ.ಎನ್. ಪಾಟೀಲ, ಸಿದ್ರಾಮನಗೌಡ್ರು ಮಸೀದಿಪುರ, ದರೂರು ಪುರುಷೋತ್ತಮಗೌಡ್ರು, ಯು. ಬಸವರಾಜ, ನಿಷ್ಠಿ ರುದ್ರಪ್ಪ, ಕೆ.ಎಂ. ಮಹೇಶ್ವರಯ್ಯಸ್ವಾಮಿ, ಎನ್. ಅಯ್ಯಪ್ಪ, ಸಂಗನಕಲ್ಲು ಚನ್ನನಗೌಡ್ರು, ಹೆಚ್.ಎಂ. ಅಂಕಲಯ್ಯಸ್ವಾಮಿ, ಡಾ. ಶರಣಬಸವ, ಆರ್.ಕೆ. ರಮೇಶ, ಮಂಜುಳಾ ರೇವಡಿ, ಹಾವಿನಾಳ ಶರಣಪ್ಪ ಮುಂತಾದವರು ಉಪಸ್ಥಿತರಿದ್ದರು. ಹೊಸಪೇಟೆ ರಾಣಿಚನ್ನಮ್ಮ ಪ್ರೌಢ ಶಾಲೆ ಮುಖ್ಯಶಿಕ್ಷಕ ಶರಣಯ್ಯ ಚರಂತಿಮಠ ಕಾರ್ಯಕ್ರವನ್ನು ನಿರೂಪಿಸಿ, ವಂದಿಸಿದರು.