ಕಲಬುರಗಿ:ಎ.1: ಸಮಾಜದಲ್ಲಿರುವ ಲಕ್ಷಾಂತರ ಬಡ, ದೀನ, ದಲಿತ, ಶೋಷಿತ,ಅನಾಥ ಮಕ್ಕಳಿಗೆ ಅನ್ನ,ಜ್ಞಾನ ದಾಸೋಹ, ಸಂಸ್ಕಾರ,ಮಾನವೀಯೆತೆಯನ್ನು ನೀಡಿ, ಅವರ ಬದುಕನ್ನು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿಗಳಾಗಿದ್ದಾರೆ. ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನನ್ನು ಕಂಡು ದೈವತ್ವಕ್ಕೇರಿದ ಮಹಾನ ಚೇತನ ಅವರಾಗಿದ್ದು, ಅವರ ಸೇವೆ ಸಮಾಜಕ್ಕೆ ಸದಾ ಮಾದರಿಯಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ 'ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶನಿವಾರ ಏರ್ಪಡಿಸಿದ್ದ ಡಾ.ಶಿವಕುಮಾರ ಮಾಹಾಸ್ವಾಮೀಜಿಯವರ 116ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ದಾಸೋಹ,ಕಾಯಕ ಸಂಸ್ಕøತಿ,ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಡಾ.ಶಿವಕುಮಾರ ಶ್ರೀಗಳ ತತ್ವ, ಸಂದೇಶ ಅಳವಡಿಕೆಯಿಂದ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಡಾ.ಸತೀಸ್ ಟಿ.ಸಣಮನಿ, ದತ್ತು ಹಡಪದ, ಇಸ್ಮೈಲ್ ಅತ್ತರ್, ಸೂರ್ಯಕಾಂತ, ಸೌಂದರ್ಯ, ಆದಿತ್ಯ, ವಿಶ್ವ, ಗಣೇಶ, ಮಹೇಶ್, ಸಾಯಿ, ಅಮೂಲ್ ಸೇರಿದಂತೆ ಮತ್ತಿತರರಿದ್ದರು.