ಡಾ.ಶಶಿಕಲಾ ಕೃಷ್ಣಮೂರ್ತಿಗೆ ಬೆಂಗಳೂರಿನ ಸನ್ಮಾನ


ದಾವಣಗೆರೆ.ನ.೨೧; ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರೋಗ್ಯ ವಿಜ್ಞಾನಗಳ ಶ್ರೇಷ್ಠ ವೈದ್ಯರುಗಳಾದ ಎಸ್‌ ಎಸ್ ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆಯ ಉಪಪ್ರಾಂಶುಪಾಲರು ಹಾಗೂ ಪೆಥಾಲಜಿ‌ ವಿಭಾಗದ ಮುಖ್ಯಸ್ಥರಾದ ಡಾ ಶಶಿಕಲಾ ಪಿ.ಕೃಷ್ಣಮೂರ್ತಿ ಹಾಗೂ ಡಾ ಆರ್.ಕೆ. ಸರೋಜ ಅವರನ್ನು   ಸನ್ಮಾನಿಸಲಾಯಿತು. ನಂತರ
ಡಾ ಶಶಿಕಲಾ ಪಿ.ಕೃಷ್ಣಮೂರ್ತಿಯವರು ಸನ್ಮಾನಿತರ ನುಡಿಗಳನ್ನಾಡಿ, ಕನ್ನಡ ಕಲಿತವನು ಜ್ಞಾನಿ, ಕನ್ನಡ ಕಲಿಸುವವನು ದಾನಿ. ಸನ್ಮಾನಿತರಲ್ಲ, ಮತ್ತೊಬ್ಬರಲ್ಲಿನ ಪ್ರತಿಭೆಯನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸಲು ಸನ್ಮಾನ ಮಾಡುವವರೇ ಯಾವಾಗಲೂ ಒಂದು ಕೈ ಮೇಲು. ಈ ಸನ್ಮಾನವು ನನಗೆ ಹರ್ಷ ತಂದಿದ್ದು ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕೆಂಬ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮರಣಾನಂತರವೂ ಒಬ್ಬ ವ್ಯಕ್ತಿಯನ್ನು ಜೀವಂತವಾಗಿರಿಸುವುದು ಸಾಹಿತ್ಯ ಕ್ಷೇತ್ರಕ್ಕೆ ಪುಸ್ತಕ ರೂಪದಲ್ಲಿ ಆ ವ್ಯಕ್ತಿ ನೀಡಿರುವ ಕೊಡುಗೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕೃಷಿ ಮಾಡಿ, ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸೋಣ. ಕನ್ನಡ ಭಾಷೆಯನ್ನು ಕಲಿಯೋಣ, ಕನ್ನಡ ಭಾಷೆಯನ್ನು ಬೆಳೆಸೋಣ ಎಂದು ಕನ್ನಡಪರ ತಮ್ಮ ಅಭಿಮಾನವನ್ನು ಎತ್ತಿ ಹಿಡಿದರು. ಡಾ ಜಯಕರ್‌ ಎಸ್.ಎಂ, ಗೌರವಾನ್ವಿತ ಕುಲಪತಿಗಳು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ ಎಂದು ಹೇಳಿ ತಮ್ಮ ಭಾಷಾಭಿಮಾಣವನ್ನು ವ್ಯಕ್ತಪಡಿಸಿದರು.ಈ ವೇಳೆ ಡಾ ರಾಮಕೃಷ್ಣ ರೆಡ್ಡಿ.ಎನ್‌,   ಎನ್‌ ಎಂ ನಾಗರಾಜ್‌,  ಮಂಜುನಾಥ ಹೆಗಡೆ ,  ಉಪಸ್ಥಿತರಿದ್ದರು.