ಡಾ. ವೈಜನಾಥ್ ಪಾಟೀಲ್‍ರಂತಹ ರಾಜಕಾರಣಿ ಸಿಗುವುದು ಅಸಾಧ್ಯ: ಡಾ. ಸಿರನೂರಕರ್

ಕಲಬುರಗಿ. ನ. 02: ಮಾಜಿ ಸಚಿವರೂ ಹಾಗೂ ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ಹೋರಾಟಗಾರರೂ ಆದ ಡಾ. ವೈಜನಾಥ್ ಪಾಟೀಲ್ ಅವರಂತಹ ರಾಜಕಾರಣಿ ಕಲ್ಯಾಣ ಕರ್ನಾಟಕದಲ್ಲಿ ಸಿಗುವುದು ಅಸಾಧ್ಯ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ್ ಅವರು ಹೇಳಿದರು.
ನಗರದಲ್ಲಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಡಾ. ವೈಜನಾಥ್ ಪಾಟೀಲ್ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಸೋಮವಾರ ಹಮ್ಮಿಕೊಂಡಿದ್ದ ವೈಜನಾಥ್ ಪಾಟೀಲ್‍ರು ಮತ್ತು ಸಂವಿಧಾನದ 371ನೇ ಕಲಂ ಅನುಷ್ಠಾನ ಕುರಿತ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಾ. ವೈಜನಾಥ್ ಪಾಟೀಲ್ ಅವರು ಸಾತ್ವಿಕ ಮತ್ತು ಸೈದ್ದಾಂತಿಕ ರಾಜಕಾರಣಿಯಾಗಿದ್ದರು ಎಂದರು.
ಕಲ್ಯಾಣ ಕರ್ನಾಟಕವನ್ನು ಆಳುವ ಸರ್ಕಾರಗಳು ನಿರ್ಲಕ್ಷಿಸಿದಾಗ ಅಸಮಾನತೆ ನಿವಾರಣೆಗಾಗಿ ಜನಪರ ಹೋರಾಟದ ಮೂಲಕ ಈ ಭಾಗದ ಅಭಿವೃದ್ಧಿಯ ಕನಸನ್ನು ಕಂಡ ಡಾ. ವೈಜನಾಥ್ ಪಾಟೀಲ್ ಅವರು ಚಳುವಳಿಯ ಪರಿಣಾಮವಾಗಿ 371(ಜೆ) ಕಲಂ ಅನುಷ್ಠಾನಕ್ಕೆ ಬರಲು ಕಾರಣವಾಯಿತು ಎಂದು ಅವರು ಹೇಳಿದರು.
ಅಭಿವೃದ್ಧಿ ಎಂದರೆ ಕೇವಲ ಬೃಹತ್ ಕಟ್ಟಡಗಳನ್ನು ನಿರ್ಮಿಸುವುದು ಅಲ್ಲ ಎಂದು ತಿಳಿಸಿದ ಅವರು, ಮಾನವ ಅಭಿವೃದ್ಧಿಗೆ ಕಾರಣವಾಗುವ ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ, ಗುಣಮಟ್ಟದ ಶಿಕ್ಷಣ, ಸಂಪರ್ಕ ಸುಧಾರಣೆ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ಮುಂತಾದವುಗಳನ್ನು ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ಕುರಿತು ಯಾರೂ ಮುತುವರ್ಜಿ ಸಹಿಸುತ್ತಿಲ್ಲ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಭಾಗಕ್ಕೆ 371(ಜೆ) ಕಲಂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಎಲ್ಲ ಅಭಿವೃದ್ಧಿ ಕಾಮಗಾರಿಗಳು ಕಾಲಮಿತಿಯಲ್ಲಿ ಆಗಬೇಕು. ಬ್ಯಾಕ್‍ಲಾಗ್ ಹುದ್ದೆಗಳನ್ನು ಸಹ ಏಕಕಾಲದಲ್ಲಿ ಭರ್ತಿ ಮಾಡಬೇಕು. ವಿಶೇಷ ಮೀಸಲಾತಿ ಸೌಲಭ್ಯಗಳಲ್ಲಿ ಆಗಿರುವ ಲೋಪ, ದೋಷಗಳನ್ನು ಸರಿಪಡಿಸುವ ಮೂಲಕ ಸಮರ್ಪಕವಾಗಿ ವಿಧೇಯಕ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಸಾನಿಧ್ಯ ವಹಿಸಿದ್ದ ಸುಲಫಲ ಮಠದ ಮಹಾಂತ ಶಿವಾಚಾರ್ಯರು ಮಾತನಾಡಿ, 371(ಜೆ) ಜಾರಿಗೆ ಕಾರಣವಾಗಿರುವ ಡಾ. ವೈಜನಾಥ್ ಪಾಟೀಲ್ ಅವರ ಪುತ್ಥಳಿಯನ್ನು ನಗರದ ಸರ್ದಾ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಸ್ಥಾಪಿಸಬೇಕು ಎಂದು ಕೋರಿದರು.
ಡಾ. ವೈಜನಾಥ್ ಪಾಟೀಲ್ ಅವರ ಹೆಸರಿನಲ್ಲಿ ಸುಲಫಲ ಮಠದ ವತಿಯಿಂದ ಪ್ರತಿ ವರ್ಷ 10,000ರೂ.ಗಳ ನಗದು ಪುರಸ್ಕಾರದೊಂದಿಗೆ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಸಜ್ಜನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ ರಾಜೇಂದ್ರ ಕರೇಕಲ್, ಎಸ್.ಬಿ. ಪಾಟೀಲ್, ಚಂದ್ರಶೇಖರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ್, ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ, ಹೋರಾಟ ಸಮಿತಿಯ ಎಂ.ಎಸ್. ಪಾಟೀಲ್ ನರಿಬೋಳ್ ಮುಂತಾದವರು ಉಪಸ್ಥಿತರಿದ್ದರು.