ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ : ಬಜೆಟ್ ನಲ್ಲಿ 11 ಕೋಟಿ ಮಂಜೂರು

ಮೈಸೂರು, ಸೆ.15:- ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಬೇಕೆಂಬ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆನ್ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಮೈಸೂರಿನ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ಆನ್‍ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿ ಆದಷ್ಟು ಬೇಗ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕನ್ನಡ ನಾಯಕ ನಟರಾಗಿದ್ದ ಡಾ. ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ. ಹಾಗಾಗಿ ಆದಷ್ಟು ಶೀಘ್ರ ಸ್ಮಾರಕ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದರು.
ಚಿತ್ರ ಕಲಾವಿದರೊಬ್ಬರಿಗೆ ಈ ಮೂಲಕ ಸರ್ಕಾರ ಗೌರವ ಸಮರ್ಪಣೆ ಮಾಡಿದಂತಾಗಿದೆ. ವಿಷ್ಣವರ್ಧನ್ ಅವರ ಹುಟ್ಟೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಗಳ ಕೂಗಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಷ್ಣು ಅವರ ವಿದ್ಯಾಭ್ಯಾಸ ಸಹ ಮೈಸೂರಿನಲ್ಲಿಯೇ ಆಗಿದ್ದು, ಅವರಿಗೂ ಹಾಗೂ ಮೈಸೂರಿಗೂ ಅವಿನಾಭಾವ ನಂಟಿದೆ.
ಒಟ್ಟು 11 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, 5.5 ಎಕರೆ ಜಾಗದಲ್ಲಿ 2 ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ತಲೆ ಎತ್ತಲಿದೆ. ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ತಲೆ ಎತ್ತುತ್ತಿರುವುದು ಸಂತಸದ ವಿಚಾರವಾಗಿದೆ. ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ ಎಂದು ಹೇಳಲು ಸಂತಸವಾಗುತ್ತದೆ.
ಈ ವಿಚಾರವಾಗಿ ಡಾ. ವಿಷ್ಣುವರ್ಧನ್ ಅವರ ಶ್ರೀಮತಿಯವಾರದ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬದವರಿಗೆ ಸರ್ಕಾರದಿಂದ ಬೇಕಾದ ಎಲ್ಲ ಸಹಕಾರ ನೀಡಲಾಗುವುದು.
ನಾಡು ಕಂಡ ಅಪ್ರತಿಮ ನಟ ವಿಷ್ಣುವರ್ಧನ್. ಅವರ ಸಾಮಾಜಿಕ ಕಳಕಳಿ, ಸಮಾಜದ ಆಗು ಹೋಗುಗಳ ಬಗ್ಗೆ ಅವರು ಸ್ಪಂದಿಸುತ್ತಿದ್ದ ರೀತಿ, ಮಾನವೀಯತೆ, ಸಾಧನೆ ಎಲ್ಲವೂ ಸ್ಮರಣೀಯ ಎಂದರು.
ಡಾ. ವಿಷ್ಣುವರ್ಧನ್ ರವರ 70ನೇ ವರ್ಷದ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಡಾ. ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕ ನಟರಾಗಿದ್ದರಲ್ಲದೆ ತಮ್ಮ ವ್ಯಕ್ತಿತ್ವದಲ್ಲೂ ಶ್ರೇಷ್ಠಗಳನ್ನು ಹೊಂದಿದ್ದರು. ಯುವಜನರಿಗೆ ಸ್ಪೂರ್ತಿಯ ಸೆಳೆಯಾಗಿದ್ದರು. ಅಭಿಮಾನಿಗಳ ಪಾಲಿಗೆ ಸಾಹಸಸಿಂಹ ಎಂದೇ ಪ್ರೀತಿ, ಆಧಾರಗಳಿಗೆ ಪಾತ್ರರಾಗಿದ್ದ ಅವರು, ತಮ್ಮ ಶಿಸ್ತು, ಸಂಯಮ, ನಡವಳಿಕೆಯಿಂದ ಎಲ್ಲರ ಪ್ರೀತಿ ಗಳಿಸಿದ್ದರು. ಡಾ. ರಾಜ್‍ಕುಮಾರ್ ನಂತರದ ಪೀಳಿಗೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದರು ಎಂದರು.
38 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುವ ಮೂಲಕ ಕನ್ನಡದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದರು. ನಾಗರಹಾವು ಸಿನಿಮಾದಿಂದ ಹಿಡಿದು ಆಪ್ತರಕ್ಷಕ ಚಿತ್ರದವರೆಗೂ ಅವರ ಸಾಧನೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸಿನಿಮಾ ರಂಗದ ಜತಗೆ ವಿಶೇಷ ಸಾಮಾಜಿಕ ಕಳಕಳಿ ಹೊಂದಿದ್ದ ಡಾ. ವಿಷ್ಣುವರ್ಧನ್, ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಹಾಗೂ ಮಾನವೀಯತೆ ತೋರುವ ವಿಶೇಷ ಗುಣ ಅವರಲ್ಲಿತ್ತು ಎಂದರು.
ಡಾ. ವಿಷ್ಣುವರ್ಧನ್ ರವರ ಧರ್ಮಪತ್ನಿ ಪದ್ಮಶ್ರೀ ಡಾ. ಭಾರತಿ ವಿಷ್ಣುವರ್ಧನ್ ಅವರು ಪಂಚಭಾಷಾ ತಾರೆಯಾಗಿ ಅತ್ಯುತ್ತಮ ಕಲಾವಿದೆಯಾಗಿ ನಾಡಿಗೆ ಕೊಡುಗೆ ನೀಡಿದ್ದಾರೆ. ಅವರ ಇಡೀ ಕುಟುಂಬವೇ ಕಲಾವಿದರ ಕುಟುಂಬವಾಗಿ ನಾಡಿನ ಚಿತ್ರರಂಗದ ಸೇವೆಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಔಚಿತ್ಯ ಪೂರ್ಣವಾಗಿದೆ. ಮೈಸೂರಿನ ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಹಾಡಾಳು ಬಳಿ 5 ಎಕರೆ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಾಣ ಆಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಪದ್ಮಶ್ರೀ ಡಾ. ಭಾರತಿವಿಷ್ಣುವರ್ಧನ್, ಶಾಸಕ ಜಿ.ಟಿ.ದೇವೆಗೌಡ, ಎಸ್.ಎ.ರಾವiದಾಸ್, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.