ಡಾ.ರಾಜ್ ಆದರ್ಶ ವ್ಯಕ್ತಿ-ಡಾ.ಸೆಲ್ವಮಣಿ

ಕೋಲಾರ,ಏ.೨೫: ರಾಜ್ಯದಲ್ಲಿ ಕೋವಿಡ್ ೨ನೇ ಅಲೆ ಹೆಚ್ಚಾಗಿ ಹರಡಿರುವುದರಿಂದ, ಡಾ. ರಾಜ್‌ಕುಮಾರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಅವರು ಮಾನವೀಯ ಗುಣವುಳ್ಳ, ಸರಳತೆಯ ಪ್ರತೀಕ ಆದರ್ಶ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಅವರು ತಿಳಿಸಿದರು.
ಕೋಲಾರದ ವಾರ್ತಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ೯೨ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅವರು ತಮ್ಮ ನಟನೆಯ ಚಲನಚಿತ್ರಗಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರ್ಶಪ್ರಾಯ ಪಾತ್ರಗಳ ಮೂಲಕ ಅವರು ಯುವಕರಿಗೆ ಒಳ್ಳೆಯ ಸಂದೇಶ ನೀಡಿ ಮಾದರಿಯಾಗಿದ್ದಾರೆ ಎಂದ ಅವರು, ಕಲೆ ಮಾತ್ರವಲ್ಲದೆ ತಮ್ಮ ಸರಳ ವ್ಯಕ್ತಿತ್ವ ಹಾಗೂ ಸಾಮಾಜಿಕ ಕಾಳಜಿ ಮೂಲಕ ನಾಡು, ನುಡಿಯ ಬೆಳವಣಿಗೆಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಆರೋಗ್ಯಕ್ಕೆ ಪರಮಾದ್ಯತೆಯನ್ನು ಕೊಟ್ಟು ತಮ್ಮ ಜೀವನದಲ್ಲಿ ಯೋಗಾಭ್ಯಾಸ ಮಾಡಿ ಆದರ್ಶವಾಗಿದ್ದರು. ಇಂದಿನ ಕರೋನಾದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ
ಒಳ್ಳೆಯ ಆರೋಗ್ಯಕ್ಕಾಗಿ ಡಾ. ರಾಜ್‌ಕುಮಾರ್ ಅವರಂತೆ ವ್ಯಾಯಾಮ ಅನುಸರಿಸಿ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮತ್ತು ಪೌಷ್ಠಿಕ ಆಹಾರ ಸೇವಿಸಿ, ಕರೋನಾದಿಂದ ದೂರವಿದ್ದು, ರಾಜ್ಯವನ್ನು ಕರೋನಾ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಕರೆ ಕೊಟ್ಟರು.
ಹಿರಿಯ ಪತ್ರಕರ್ತರು ಹಾಗೂ ಕನ್ನಡ ಪಕ್ಷ ಮತ್ತು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಕೋ.ನಾ.ಪ್ರಭಾಕರ್ ಅವರು ಮಾತನಾಡಿ, ಡಾ|| ರಾಜ್‌ಕುಮಾರ್ ಅವರು ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿ ನೇತ್ರದಾನಕ್ಕೆ ಬಹಳ ಒತ್ತು ಕೊಟ್ಟಿದ್ದರು. ನೇತ್ರದಾನದಿಂದ ಇತರರು ಪ್ರಪಂಚವನ್ನು ನೋಡಲು ಅನುಕೂಲವಾಗುತ್ತದೆ. ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಡಾ. ರಾಜ್‌ಕುಮಾರ್ ನೇತ್ರದಾನ ಕೇಂದ್ರವನ್ನು ತೆರೆಯಲು ಹಾಗೂ ಜಿಲ್ಲೆಯ ಒಳಾಂಗಣ ಕ್ರೀಡಾಂಗಣಕ್ಕೆ ಡಾ. ರಾಜ್‌ಕುಮಾರ್ ಅವರ ಹೆಸರನ್ನು ಇಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುನಿರಾಜು, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಅ.ಕೃ.ಸೋಮಶೇಖರ್, ಕನ್ನಡ ಪಕ್ಷ ಮತ್ತು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಾ.ಮಂಜುನಾಥ್, ಉಪಾಧ್ಯಕ್ಷರಾದ ಪಿ.ಸುನಿಲ್‌ರಾಜ್, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾದ ಕೆ.ಆರ್.ತ್ಯಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನಾಗಾನಂದ ಕೆಂಪರಾಜ್, ರಾಶಿರಾಪು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಕನ್ನಡ ಮಿತ್ರ ಶ್ರೀಕಾಂತ್ ಮತ್ತು ಕೇಸರ್ ಗೌಡ ಮತ್ತಿತ್ತರರು ಉಪಸ್ಥಿತರಿದ್ದರು.