ಡಾ.ಬಿ.ಆರ್.ಅಂಬೇಡ್ಕರ್ ಸಂದೇಶ, ವಿಚಾರ ಅಳವಡಿಕೆಯಿಂದ ಸಮಾಜ ಸುಧಾರಣೆ ಸಾಧ್ಯ

ಚಾಮರಾಜನಗರ, ಏ.15:- ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂದೇಶಗಳು ಹಾಗೂ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಿಸಿ ಅವರು ಮಾತನಾಡಿದರು.
ಮಾನವೀಯತೆ, ಸಮಾನತೆ ಮೌಲ್ಯಗಳಂತಹ ವಿಚಾರಧಾರೆಗಳ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೊಂದಿದ್ದ ಧೋರಣೆ, ನಿಲುವುಗಳು ಎಂದಿಗೂ ಆದರ್ಶ ಪ್ರಾಯವಾಗಿವೆ. ಅಗಾಧಜ್ಞಾನ ಹೊಂದಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶ, ಮಾರ್ಗಗಳಲ್ಲಿ ನಡೆದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.
ಇಡೀ ಸಮುದಾಯಕ್ಕೆ ಸಮಾನತೆ ಇರಬೇಕು. ಯಾರಿಗೂ ಯಾವುದೇ ತೊಂದರೆ ನೀಡಬಾರದು. ಅಸ್ಪøಶ್ಯತೆ, ಕೀಳು-ಮೇಲು, ಜಾತಿ ಪದ್ದತಿ ಹೋಗಬೇಕು ಎನ್ನುವ ಸದುದ್ದೇಶದೊಂದಿಗೆ ಹೋರಾಟ ಮಾಡಿದವರು ಡಾ. ಬಿ.ಆರ್. ಅಂಬೇಡ್ಕರ್. ಅವರ ಉದಾತ್ತ ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ದೇಶಕ್ಕೆ ಮಹತ್ತರ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ಇತರೆ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಸಹ ತೋರಿಸಿ ಕೊಟ್ಟಿದ್ದಾರೆ.
ಚುನಾವಣೆಯ ಪ್ರಸ್ತುತ ಸಂದರ್ಭದಲ್ಲಿ ಮತದಾನದಂತಹ ಮಹತ್ವದ ಹಕ್ಕು ಚಲಾಯಿಸಲು ಪ್ರತಿಯೊಬ್ಬರು ಮುಂದಾಗಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ನುಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಎಸ್. ಪೂವಿತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ, ಡಿವೈಎಸ್‍ಪಿ. ಪ್ರಿಯದರ್ಶಿನಿ ಸಾಣಿಕೊಪ್ಪ, ಸಮಾಜ ಕಲ್ಯಾಣ ಉಪನಿರ್ದೇಕ ಮಲ್ಲಿಕಾರ್ಜುನ್, ನಗರಸಭೆಯ ಪೌರಾಯುಕ್ತ ಎಸ್. ವಿ. ರಾಮ್‍ದಾಸ್ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಜಿಲ್ಲಾಡಳಿತ ಭವನದಆವರಣದ ಮುಂಭಾಗದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಬುದ್ಧ ವಂದನೆ ಸಲ್ಲಿಸಲಾಯಿತು. ಗಣ್ಯರು ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.